ಧೂಮಪಾನ ತ್ಯಜಿಸಿ, ಶ್ವಾಸಕೋಶದ ಕ್ಯಾನ್ಸರ್ ದೂರವಿಡಿ. ✍️ ಡಾ.ಅಜಿತ್ ಈಟಿ , ಶ್ವಾಸಕೋಶ ತಜ್ಞರು.
Aug 1st 2020 - ಇಂದು ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನ . ನಮ್ಮೆಲ್ಲರಿಗೂ ತಿಳಿದಿರುವ ಹಾಗೆ ಕ್ಯಾನ್ಸರ್ ರೋಗವು ಮಾರಣಾಂತಿಕ ವಾಗಿದ್ದು , ಜಗತ್ತಿನಾದ್ಯಂತ ಸಂಭವಿಸುವ ಸಾವುಗಳಿಗೆ ಪ್ರಮುಖ ಕಾರಣವಾಗಿದೆ . ಮಾನವ ದೇಹದಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಗಳ ಪೈಕಿ ಶ್ವಾಸಕೋಶದ ಕ್ಯಾನ್ಸರ್ ಅಗ್ರಸ್ಥಾನ ಪಡೆದಿದ್ದು , ಕ್ಯಾನ್ಸರ್ ನಿಂದ ಆಗುವ ಸಾವುಗಳಿಗೂ ಮುಂಚೂಣಿಯಲ್ಲಿದೆ.
ಜಗತ್ತಿನಾದ್ಯಂತ ಸಂಭವಿಸುವ ಪ್ರತಿ 5 ಕ್ಯಾನ್ಸರ್ ಸಾವುಗಳಲ್ಲಿ , 1 ಸಾವು ಶ್ವಾಸಕೋಶದ ಕ್ಯಾನ್ಸರ್ ನಿಂದ ಆಗಿರುತ್ತದೆ. WHO ಪ್ರಕಾರ 2018 ರಲ್ಲಿ ಜಗತ್ತಿನಾದ್ಯಂತ 20.9 ಲಕ್ಷ ರೋಗಿಗಳು ಶ್ವಾಸಕೋಶದ ಕ್ಯಾನ್ಸರ್ ಭಾದಿತರಾಗಿದ್ದು, ಅವರಲ್ಲಿ 17.9 ಲಕ್ಷ ರೋಗಿಗಳು ಸಾವನ್ನಪ್ಪಿದ್ದಾರೆ. ಭಾರತವು ಸಹ ಅತಿ ಹೆಚ್ಚು ಶ್ವಾಸಕೋಶದ ಕ್ಯಾನ್ಸರ್ ಬಾಧಿತ ರಾಷ್ಟ್ರಗಳಲ್ಲಿ ಹೆಸರು ಪಡೆದುಕೊಂಡಿದೆ.
ಕಾರಣಗಳೇನು ??
ಶ್ವಾಸಕೋಶದ ಕ್ಯಾನ್ಸರ್ ಯಾವುದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದಾಗಿದ್ದು , ಸಾಮಾನ್ಯವಾಗಿ 50 ವರ್ಷ ಹಾಗೂ ಮೇಲ್ಪಟ್ಟ ವಯೋಮಾನದ ಪುರುಷರಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು. ಶೇಕಡಾ 85- 90 % ರಷ್ಟು ಶ್ವಾಸಕೋಶದ ಕ್ಯಾನ್ಸರ್ ಧೂಮಪಾನದಿಂದ ಕಾಣಿಸಿಕೊಳ್ಳುತ್ತದೆ. ಅನುವಂಶಿಯತೆ , ವಾಯುಮಾಲಿನ್ಯ , ವೃತ್ತಿ ಸಂಬಂಧದ ಮಾಲಿನ್ಯ ( ಸಿಲಿಕಾ, ಅಸ್ಬೇಷ್ಟೋಸ್, ಆರ್ಸೆನಿಕ್, ಯುರೇನಿಯಂ ) , ಸಿ.ಒ.ಪಿ.ಡಿ ಕಾಯಿಲೆ , ಆಹಾರ ಪದ್ಧತಿ ಹಾಗೂ ಜೀವನ ಶೈಲಿ ಇತೆ ಕಾರಣಗಳಾಗಿವೆ.
ಶ್ವಾಸಕೋಶ ಕ್ಯಾನ್ಸರ್ ಹಾಗೂ ಧೂಮಪಾನ !!
ಶ್ವಾಸಕೋಶದ ಕ್ಯಾನ್ಸರ್ ಗೆ ಧೂಮಪಾನ ವೇ ಪ್ರಮುಖ ಕಾರಣ. ಧೂಮಪಾನದ ವ್ಯಸನಿಗಳಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಇತರರಿಗಿಂತ ಸರಾಸರಿ 25 ರಷ್ಟು ಹೆಚ್ಚಾಗಿರುತ್ತದೆ. W.H.O ಪ್ರಕಾರ ವಿಶ್ವದ 12% ರಷ್ಟು ಧೂಮಪಾನಿಗಳು ಭಾರತದವರು. ಭಾರತದಲ್ಲಿ 1998 ರಿಂದ 2015 ರವರೆಗೆ ಧೂಮಪಾನಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ ( ಶೇಖಡ 36 ರಷ್ಟು).
ರೋಗಲಕ್ಷಣಗಳು:
ವಾರಗಟ್ಟಲೆ / ತಿಂಗಳುಗಟ್ಟಲೆ ಬಾಧಿಸುವ ಕೆಮ್ಮು , ಕೆಮ್ಮಿನಲ್ಲಿ ರಕ್ತ ಬೀಳುವುದು , ಎದೆ ನೋವು ,ಧ್ವನಿ ಬದಲಾಗುವುದು , ಆಹಾರ ಸೇರದೆ ಇರುವುದು , ತೂಕ ಕಡಿಮೆಯಾಗುವುದು , ಉಸಿರಾಟದ ತೊಂದರೆ - ಹೀಗೆ ಹಲವು ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಪದೇಪದೇ ನ್ಯುಮೋನಿಯ ( ಶ್ವಾಸಕೋಶದ ಸೋಂಕು ) , ಎದೆಯಲ್ಲಿ ನೀರು ತುಂಬಿಕೊಳ್ಳುವುದು ಅನ್ಯ ಲಕ್ಷಣಗಳಾಗಿವೆ.
ರೋಗ ಪತ್ತೆ ಹಚ್ಚುವುದು ಹೇಗೆ ??
ಶ್ವಾಸಕೋಶದ ಕ್ಷ-ಕಿರಣ , ಸಿ.ಟಿ ಸ್ಕ್ಯಾನ್ , ಬ್ರೊಂಕೊ ಸ್ಕೋಪಿ , ಪಿ.ಇ.ಟಿ ಸ್ಕ್ಯಾನ್ - ಇವುಗಳ ಸಹಾಯದಿಂದ ಕಾಯಿಲೆ ಪತ್ತೆ ಹಚ್ಚಬಹುದಾಗಿದೆ.
ತಡೆಗಟ್ಟುವಿಕೆ ಹಾಗೂ ಚಿಕಿತ್ಸೆ :
ಶ್ವಾಸಕೋಶದ ಕ್ಯಾನ್ಸರ್ ಮಾರಣಾಂತಿಕ ವಾಗಿರುವುದರಿಂದ , ಅದರ ತಡೆಗಟ್ಟುವಿಕೆ ಕಡೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಧೂಮಪಾನ ತ್ಯಜಿಸುವುದು ಅತ್ಯವಶ್ಯಕ. ಧೂಮಪಾನವನ್ನು ಯಾವುದೇ ವಯಸ್ಸಿನಲ್ಲಿ ತ್ಯಜಿಸಿದರೂ ಕೂಡ , ಶ್ವಾಸಕೋಶದ ಕ್ಯಾನ್ಸರ್ ಸಂಭವಿಸುವ ಸಾಧ್ಯತೆ ಕಡಿಮೆಯಾಗುತ್ತದೆ.
ಆರಂಭಿಕ ಹಂತದಲ್ಲೇ ರೋಗ ಪತ್ತೆ ಆದರೆ, ಗುಣಪಡಿಸುವ ಅವಕಾಶ ಹೆಚ್ಚಾಗಿರುತ್ತದೆ. 50 ವರ್ಷ ಮೇಲ್ಪಟ್ಟ ಧೂಮಪಾನಿಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಆಗುವ ಸಾಧ್ಯತೆ ಹೆಚ್ಚಿರುವುದರಿಂದ , ನಿಯಮಿತ ಮಧ್ಯಂತರದಲ್ಲಿ ಲೋ -ಡೋಜ್ ಸಿ.ಟಿ ಸ್ಕ್ಯಾನ್ ಮಾಡಲಾಗುತ್ತದೆ. ಶಸ್ತ್ರಚಿಕಿತ್ಸೆ, ಕೀಮೋಥೆರಪಿ , ರೇಡಿಯೋಥೆರಪಿ ಹೀಗೆ ವಿವಿಧ ಚಿಕಿತ್ಸಾ ಕ್ರಮಗಳಿಂದ ಚಿಕಿತ್ಸೆ ನೀಡಲಾಗುತ್ತದೆ.
ಕೆ.ಪಿ.ಎ ಸಂಘವು ಈ ದಿನದಂದು ಜನಸಾಮಾನ್ಯರಿಗೆ ನೀಡುತ್ತಿರುವ ಸಂದೇಶ - “ ಧೂಮಪಾನ ತ್ಯಜಿಸಿ, ಶ್ವಾಸಕೋಶದ ಕ್ಯಾನ್ಸರ್ ದೂರವಿಡಿ”.
ಲೇಖಕರು:
ಡಾ. ಅಜಿತ್ ಈಟಿ
ಶ್ವಾಸಕೋಶದ ತಜ್ಞರು
"ಉಸಿರು"- ದಿ ಬ್ರೀಥ್ ಕ್ಲಿನಿಕ್
ದಾವಣಗೆರೆ.
ph : 9900806121
Mail : ajith.eti1@gmail.com
ಶ್ವಾಸಕೋಶದ ತಜ್ಞರು
"ಉಸಿರು"- ದಿ ಬ್ರೀಥ್ ಕ್ಲಿನಿಕ್
ದಾವಣಗೆರೆ.
ph : 9900806121
Mail : ajith.eti1@gmail.com
Comments
Post a Comment