ಶ್ವಾಸಕೋಶದ ಮಹತ್ವ ತಿಳಿಸಿಕೊಟ್ಟ ಕರೋನ

.

ಇಂದು ವಿಶ್ವ ಶ್ವಾಸಕೋಶ ದಿನ. ಮಾನವ ದೇಹದ 5 ಪ್ರಮುಖ ಅಂಗಾಂಗಗಳಲ್ಲಿ ಒಂದಾದ ಶ್ವಾಸಕೋಶ , ದೇಹದ ಸದೃಢ ಆರೋಗ್ಯ ಕಾಪಾಡುವಲ್ಲಿ ಪ್ರಧಾನವಾದ ಪಾತ್ರ ವಹಿಸುತ್ತದೆ. ಎದೆಯ ಭಾಗದಲ್ಲಿ ಹೃದಯದ ಅಕ್ಕ-ಪಕ್ಕ 2 ಶ್ವಾಸಕೋಶಗಳು ಕುಳಿತಿವೆ. ಇವುಗಳ ಪ್ರಮುಖ ಕೆಲಸ - ನಾವು ಸೇವಿಸುವ ಗಾಳಿಯಲ್ಲಿರುವ ಆಮ್ಲಜನಕವನ್ನು ರಕ್ತದ ಮೂಲಕ ದೇಹದ ಪ್ರತಿ ಜೀವಕೋಶಗಳಿಗೂ ಸರಬರಾಜು ಮಾಡುವುದು ಹಾಗೂ ಕೋಶಗಳಿಂದ ಬಿಡಲಾದ ಇಂಗಾಲದ ಡೈಯಾಕ್ಸೈಡ್ ಹೊರಹಾಕುವುದಾಗಿದೆ. ದೇಹದ ನೀರಿನ ಹಾಗೂ ಉಷ್ಣಾಂಶ ಸಮತೋಲನ, ಸೂಕ್ಷ್ಮ ಕ್ರಿಮಿಗಳ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ಕಾಪಾಡುವಲ್ಲಿಯೂ ಸಹ ಶ್ವಾಸಕೋಶಗಳು ಮುಖ್ಯ ಪಾತ್ರ ವಹಿಸುತ್ತವೆ.

ಶ್ವಾಸಕೋಶದ ತೊಂದರೆ ಹಾಗೂ ರೋಗಗಳು ಶತ ಶತಮಾನಗಳಿಂದಲೂ ಮಾನವನನ್ನು ಭಾದಿಸುತ್ತಾ ಬಂದಿದೆ. ವಿಶ್ವದಾದ್ಯಂತ ಸಂಭವಿಸುತ್ತಿರುವ ಸಾವುಗಳಿಗೆ ಕಾರಣಗಳನ್ನು ನೋಡಿದಾಗ, ಮೊದಲನೆಯ ಸ್ಥಾನ ಹೃದಯ ರೋಗಗಳು ಪಡೆದುಕೊಂಡರೆ , ಎರಡನೆಯ ಸ್ಥಾನ ಶ್ವಾಸಕೋಶದ ಕಾಯಿಲೆಗಳಾಗಿವೆ. ಉಲ್ಬಣ ಗೊಳ್ಳುತ್ತಿರುವ ವಾಯುಮಾಲಿನ್ಯ, ಹೆಚ್ಚುತ್ತಿರುವ ಧೂಮಪಾನ ಸೇವನೆ ಹಾಗೂ ಅನಾರೋಗ್ಯಕರ ಜೀವನ ಶೈಲಿಯಿಂದಾಗಿ ಕಳೆದ ದಶಕದಲ್ಲಿ ಶ್ವಾಸಕೋಶ ಕಾಯಿಲೆಗಳು ಗಣನೀಯವಾಗಿ ಏರಿಕೆಯಾಗಿದೆ.

ಶ್ವಾಸಕೋಶ ವನ್ನು ಬಾಧಿಸುವ ಪ್ರಮುಖ ಕಾಯಿಲೆಗಳ ಬಗ್ಗೆ ತಿಳಿದುಕೊಳ್ಳೋಣ. ಅಸ್ತಮಾ , ದಮ್ಮು ಕಾಯಿಲೆ ( ಸಿ.ಓ.ಪಿ.ಡಿ ) , ಪಲ್ಮನರಿ ಫೈಬ್ರೋಸಿಸ್ , ಶ್ವಾಸಕೋಶದ ಕ್ಯಾನ್ಸರ್ - ಇವು ಹೇರಳವಾಗಿ ಕಾಣಿಸಿಕೊಳ್ಳುತ್ತಿರುವ ದೀರ್ಘಕಾಲದ ಶ್ವಾಸಕೋಶದ ತೊಂದರೆಗಳಾಗಿವೆ . ಶ್ವಾಸಕೋಶದ ಸೋಂಕು - ಬ್ರಾಂಕೈಟಿಸ್ , ಕ್ಷಯರೋಗ ಹಾಗೂ ನ್ಯುಮೋನಿಯಾ (ಶ್ವಾಸಕೋಶದ ತೀವ್ರತರಹದ ಸೋಂಕು) ಕಾಯಿಲೆಗಳು ತುರ್ತು ಶ್ವಾಸಕೋಶದ ತೊಂದರೆಗಳಾಗಿವೆ.

ಅಂಕಿ ಅಂಶಗಳನ್ನು ಗಮನಿಸಿದಾಗ , ಭಾರತ ದೇಶವು ವಿಶ್ವದ ಶೇಕಡ 32% ರಷ್ಟು ಶ್ವಾಸಕೋಶದ ಅಸ್ವಸ್ಥ ರೋಗಿಗಳ ಹೊರೆ ಹೊತ್ತಿದ್ದು , ಈ ರೋಗಗಳಲ್ಲಿ ನಮ್ಮ ದೇಶ ಅಗ್ರಸ್ಥಾನ ಪಡೆದಿದೆ. ಪ್ರಮುಖವಾಗಿ ಧೂಮಪಾನದಿಂದ ಬರುವ ಸಿ.ಓ.ಪಿ.ಡಿ ರೋಗವು ಭಾರತದಲ್ಲಿ ಪ್ರತಿವರ್ಷ ಸರಿ ಸುಮಾರು 8 ಲಕ್ಷ ಸಾವಿಗೆ ಕಾರಣವಾದರೆ , ಶ್ವಾಸಕೋಶದ ಕ್ಯಾನ್ಸರ್ ರೋಗವು ಅನ್ಯ ಕ್ಯಾನ್ಸರ್ ಗಳಿಗಿಂತ ಅತ್ಯಂತ ಮಾರಣಾಂತಿಕವಾಗಿದ್ದು 2018 ರಲ್ಲಿ 63 ಸಾವಿರ ಜನರನ್ನು ಬಲಿ ಪಡೆದಿದೆ. ಸುಮಾರು 37 ದಶಲಕ್ಷ ಜನರು ಆಸ್ತಮ ತೊಂದರೆಯಿಂದ ಬಳಲುತ್ತಿದ್ದಾರೆ. ಕ್ಷಯರೋಗದಿಂದ 2018ರಲ್ಲಿ ಸುಮಾರು 4.4 ಲಕ್ಷ ಜನರು ಅಸುನೀಗಿದ್ದಾರೆ. ನ್ಯುಮೋನಿಯಾ ರೋಗವು ಸಹ ಪ್ರತಿ ವರ್ಷ ಲಕ್ಷಗಟ್ಟಲೆ ಸಾವುಗಳಿಗೆ ಕಾರಣವಾಗಿದೆ.

ಈ ರೀತಿಯಾಗಿ ಭಾರತದಲ್ಲಿ ಕಳೆದ ಎರಡು ದಶಕಗಳಲ್ಲಿ ಶ್ವಾಸಕೋಶದ ತೊಂದರೆಗಳು ಶೇಕಡ 25 ರಿಂದ 30 ರಷ್ಟು ಹೆಚ್ಚಾಗಿದೆ. ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು - ಧೂಮಪಾನ. ವಿಶ್ವದ 12% ರಷ್ಟು ಧೂಮಪಾನಿಗಳು ಭಾರತದವರು. ಭಾರತದಲ್ಲಿ ಕಳೆದ ಎರಡು ದಶಕದಲ್ಲಿ ಶೇಖಡ 36 ರಷ್ಟು ಧೂಮಪಾನಿಗಳ ಸಂಖ್ಯೆ ಹೆಚ್ಚಳವಾಗಿದೆ . ಎರಡನೆಯ ಕಾರಣ- ವಾಯು ಮಾಲಿನ್ಯ. ವಾಹನಗಳ ದಟ್ಟಣೆ , ರಸ್ತೆಯ ಧೂಳು , ನಗರೀಕರಣ ಹಾಗೂ ಉದ್ಯಮೀಕರಣ ದಿಂದಾಗಿ ನಾವು ಉಸಿರಾಡುವ ಗಾಳಿಯ ಗುಣಮಟ್ಟ ಗಣನೀಯವಾಗಿ ಕುಸಿದಿದೆ. ಕಟ್ಟಿಗೆ ಒಲೆಯ ಹೊಗೆ, ಸೊಳ್ಳೆಯ ಬತ್ತಿಯ ಹೊಗೆ , ಮನೆಯೊಳಗಿನ ಧೂಮಪಾನ ಹೀಗೆ - ಒಳಾಂಗಣದ ವಾಯುಮಾಲಿನ್ಯವೂ ಹೆಚ್ಚಾಗುತ್ತಿದೆ.

ಶ್ವಾಸಕೋಶದ ಕಾಯಿಲೆಗಳಿಂದ ಈ ಪರಿಪ್ರಮಾಣದಲ್ಲಿ ಮರಣ ಸಂಭವಿಸುತ್ತಿರುವದಕ್ಕೆ ಇನ್ನೊಂದು ಮುಖ್ಯ ಕಾರಣವೆಂದರೆ ಜನಸಾಮಾನ್ಯರಲ್ಲಿ ಶ್ವಾಸಕೋಶದ ರೋಗಗಳ ಬಗ್ಗೆ ಇರುವ ಅಜ್ಞಾನ , ತಪ್ಪು ಮಾಹಿತಿ , ನಿರ್ಲಕ್ಷ ಹಾಗೂ ಸರಿಯಾದ ಸಮಯಕ್ಕೆ ಶ್ವಾಸಕೋಶ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯದೇ ಇರುವುದು. ಪ್ರಸ್ತುತ ಪರಿಸ್ಥಿತಿಯಲ್ಲಿ ಇಡೀ ವಿಶ್ವವೇ ಕರೋನ ಸೋಂಕಿನ ವಿರುದ್ಧ ಹೋರಾಡುತ್ತಿದೆ. ಈ ಕೋವಿಡ್ ನ್ಯುಮೋನಿಯಾ ರೋಗವು ಪ್ರಮುಖವಾಗಿ ಶ್ವಾಸಕೋಶದ ಸಮಸ್ಯೆ ಆಗಿರುವುದರಿಂದ , ಎಲ್ಲರೂ ಸಹ ಶ್ವಾಸಕೋಶದ ಬಗ್ಗೆ ಹಿಂದೆಂದೂ ಇಲ್ಲದ ಹೆಚ್ಚು ಮಾಹಿತಿ ಪಡೆಯುತ್ತಿದ್ದಾರೆ, ಕಾಳಜಿ ವಹಿಸುತ್ತಿದ್ದಾರೆ. ಆದರೆ ಕೋವಿಡ್ ಆರಂಭವಾಗುವ ಪೂರ್ವ - ಜನಸಾಮಾನ್ಯರಲ್ಲಿ ಶ್ವಾಸಕೋಶದ ಮಹತ್ವ , ಅದರ ರೋಗಗಳ ಬಗ್ಗೆ ಇದ್ದ ಮಾಹಿತಿ ಹಾಗೂ ಕಾಳಜಿ ನೀರಸ ಎಂದರೆ ತಪ್ಪಾಗಲಾರದು.

ಶ್ವಾಸಕೋಶ ಸಂಬಂಧದ ತೊಂದರೆಗಳಾದ ಕೆಮ್ಮು , ಕಫ ಕಟ್ಟುವುದು , ಅಲರ್ಜಿ , ದಮ್ಮು, ವೀಸಿಂಗ್ , ಉಸಿರಾಟದ ತೊಂದರೆ , ಎದೆ ನೋವು , ಗೊರಕೆ - ಹೀಗೆ ವಿವಿಧ ರೋಗ ಲಕ್ಷಣಗಳಿಗೆ , ಸಾರ್ವಜನಿಕರು ನೇರವಾಗಿ ಶ್ವಾಸಕೋಶ ತಜ್ಞ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯುವುದು ಪ್ರಸ್ತುತ ಪರಿಸ್ಥಿತಿಯಲ್ಲಿ ಅತ್ಯವಶ್ಯಕವಾಗಿದೆ. ಶ್ವಾಸಕೋಶದ ತೊಂದರೆಗಳಿಗೂ ತಜ್ಞ ವೈದ್ಯರಿದ್ದಾರೆ ( ಪಲ್ಮೊನಾಲಜಿಸ್ಟ್ ) ಎಂಬುದನ್ನು ತಿಳಿದು , ಅಮೂಲ್ಯ ಸಮಯ ವ್ಯರ್ಥ ಮಾಡದೆ ಅವರಿಂದ ಸರಿಯಾದ ಚಿಕಿತ್ಸೆ ಪಡೆದರೆ ಬಹುಪಾಲು ರೋಗಗಳನ್ನು ಬೇಗನೆ ಗುಣಪಡಿಸಬಹುದು ಹಾಗೂ ಸಾವುಗಳನ್ನು ತಡೆಯಬಹುದು. ಅಸ್ತಮಾ ,ದಮ್ಮು, ಕ್ಯಾನ್ಸರ್ , ಕ್ಷಯರೋಗ , ನ್ಯುಮೋನಿಯಾ ದಂತಹ ಸಮಸ್ಯೆಗಳಿಗೆ ಶ್ವಾಸಕೋಶ ತಜ್ಞ ವೈದ್ಯರಿಂದ ಬೇಗನೆ ಪತ್ತೆಹಚ್ಚಿ ಚಿಕಿತ್ಸೆ ಪಡೆದಾಗ ಖಂಡಿತ ಉತ್ತಮ ಫಲಿತಾಂಶ ದೊರೆಯುವುದು.

ಆರೋಗ್ಯಕರ ಶ್ವಾಸಕೋಶ ಕಾಪಾಡಿಕೊಳ್ಳಲು ಕೆಲವು ಸಲಹೆಗಳು :

- ಶ್ವಾಸಕೋಶದ ದೊಡ್ಡ ವೈರಿಯಾದ ಧೂಮಪಾನವನ್ನು ತ್ಯಜಿಸಬೇಕು.

- ನಾವು ಸೇವಿಸುವ ಗಾಳಿಯು ಶುದ್ಧ ಹಾಗೂ ಆಹ್ಲಾದಕರ ವಾಗಿರಬೇಕು. ಧೂಳು ಹಾಗೂ ಮಾಲಿನ್ಯದಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು.

- ಹೆಚ್ಚು ಗಿಡ-ಮರಗಳನ್ನು ಬೆಳೆಸಿ , ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು.

- ಕೈಗಳ ನೈರ್ಮಲ್ಯ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್ ಧರಿಸುವುದರಿಂದ ಕರೋನ ಅಷ್ಟೇ ಅಲ್ಲ , ವಾಯುಮಾಲಿನ್ಯ ಹಾಗೂ ಇತರೆ ಶ್ವಾಸಕೋಶದ ಸೋಂಕು ಗಳಿಂದಲೂ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.

- ತಜ್ಞವೈದ್ಯರ ಸಲಹೆಯ ಪಡೆದು ನ್ಯೂಮೊಕಾಕ್ಕಲ್ ಹಾಗೂ ಇನ್ಫ್ಲುಎಂಜಾ ಲಸಿಕೆ ಪಡೆಯಬಹುದು. ಈ ಲಸಿಕೆಗಳು ಪ್ರಮುಖವಾಗಿ 65 ವರ್ಷ ಮೇಲ್ಪಟ್ಟ ವರು, ಅಸ್ತಮಾ/ದಮ್ಮು ರೋಗ/ ಸಕ್ಕರೆ ಕಾಯಿಲೆ /ರಕ್ತದೊತ್ತಡ/ ಹೃದಯ/ ಕಿಡ್ನಿ ತೊಂದರೆ- ಇತರೆ ಅನ್ಯ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಪಡೆಯಬೇಕು .ಇದರಿಂದ ಶ್ವಾಸಕೋಶದ ಸೋಂಕು/ ನ್ಯುಮೋನಿಯಾ ಸಂಭವಿಸುವ ಸಾಧ್ಯತೆ ಕಡಿಮೆಗೊಳಿಸಬಹುದು.

- ಅಸ್ತಮಾ ಹಾಗೂ ದಮ್ಮು ರೋಗದಿಂದ ಬಳಲುತ್ತಿರುವವರು ತಜ್ಞರ ಸಲಹೆ ಪಡೆದು ಇನ್ಹೇಲರ್ ಚಿಕಿತ್ಸೆ ಪಡೆಯಬೇಕು.

- ಮಿತ ಪೌಷ್ಟಿಕ ಆಹಾರ ಸೇವನೆ , ವ್ಯಾಯಾಮ , ಯೋಗ ಪ್ರಾಣಯಾಮ ರೂಡಿಸಿಕೊಳ್ಳಬೇಕು. ಆರೋಗ್ಯಕರ ತೂಕ ಕಾಪಾಡಿಕೊಳ್ಳಬೇಕು.

- ಪ್ರತಿನಿತ್ಯ ನಮ್ಮ ಉಸಿರಿನ ಮೇಲೆ ಗಮನವಿಟ್ಟು 10-15 ನಿಮಿಷ ಧ್ಯಾನ ಮಾಡಬೇಕು.

ಪ್ರಸ್ತುತ ಕೋವಿಡ್ -19 ಪಿಡುಗಿನಿಂದ ಜನಸಾಮಾನ್ಯರಿಗೆ ಶ್ವಾಸಕೋಶದ ಮಹತ್ವ ವೇನು ಎಂಬುದು ಅರಿವಾಗಿದೆ. ಇದೇ ರೀತಿ ಅನ್ಯ ಮಾರಣಾಂತಿಕ ಶ್ವಾಸಕೋಶ ರೋಗಗಳ ಬಗ್ಗೆಯೂ ಜನರು ಎಚ್ಚೆತ್ತುಕೊಂಡು, ತೊಂದರೆ ಇದ್ದರೆ ನೇರವಾಗಿ ಶ್ವಾಸಕೋಶ ತಜ್ಞ ವೈದ್ಯರಿಂದ ಸಲಹೆ ಹಾಗೂ ಚಿಕಿತ್ಸೆ ಪಡೆದರೆ , ಶ್ವಾಸಕೋಶದ ಸ್ವಸ್ಥತೆ ಕಾಪಾಡಿಕೊಳ್ಳಬಹುದು ಹಾಗೂ ಇವುಗಳಿಂದ ಆಗುವ ಅಪಾರ ಸಾವು-ನೋವುಗಳನ್ನು ತಡೆಯಬಹುದು.


ಲೇಖಕರು:





ಡಾ. ಅಜಿತ್ ಈಟಿ , ಶ್ವಾಸಕೋಶ ತಜ್ಙರು
"ಉಸಿರು"- ಕ್ಲಿನಿಕ್ , ದಾವಣಗೆರೆ.
ಕರ್ನಾಟಕ ಪಲ್ಮೊನಾಲಜಿ ಸಂಘದ ಸದಸ್ಯರು
ph : 9900806121
mail id : ajith.eti1@gmail.com


Comments

  1. ಸರ್ ಶುಭಸಂಜೆ ನಿಮ್ಮ ಸೇವೆ ಶ್ಾಘನೀಯವಾಗಿದೆ. ವ್ಯೆದ್ಯರ ದಿನದ ಶುಭಾಶಯಗಳು

    ReplyDelete

Post a Comment

Popular posts from this blog

ಅಲರ್ಜಿ , ಅಸ್ತಮಾ , ಇನ್ಹೇಲರ್ ಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ✍️ಡಾ.ಅಜಿತ್ ಈಟಿ

ಗೊರಕೆ ನಿರ್ಲಕ್ಷಿಸಿದರೆ ಅಪಾಯ !

ಧೂಮಪಾನ ತ್ಯಜಿಸಿ, ಶ್ವಾಸಕೋಶದ ಕ್ಯಾನ್ಸರ್ ದೂರವಿಡಿ. ✍️ ಡಾ.ಅಜಿತ್ ಈಟಿ , ಶ್ವಾಸಕೋಶ ತಜ್ಞರು.