ಅಲರ್ಜಿ , ಅಸ್ತಮಾ , ಇನ್ಹೇಲರ್ ಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ✍️ಡಾ.ಅಜಿತ್ ಈಟಿ

✍️ಡಾ. ಅಜಿತ್ ಈಟಿ , ಶ್ವಾಸಕೋಶದ ತಜ್ಞರು, ದಾವಣಗೆರೆ



May 5 2020 - “ವಿಶ್ವ ಅಸ್ತಮಾ ದಿನ”. ಸಾರ್ವಜನಿಕರಲ್ಲಿ ಅಸ್ತಮಾ ರೋಗದ ಬಗ್ಗೆ ಜಾಗೃತಿ ಮೂಡಿಸುವ ಹಿತದೃಷ್ಟಿಯಿಂದ, ಪ್ರತಿವರ್ಷ ಮೇ ತಿಂಗಳ ಮೊದಲನೇ ಮಂಗಳವಾರ "ವಿಶ್ವ ಆಸ್ತಮಾ ದಿನ" ವೆಂದು ಗುರುತಿಸಲಾಗುತ್ತದೆ. ಆಧುನಿಕ ಯುಗದ ಆಹಾರ ಪದ್ಧತಿ, ಜೀವನ ಶೈಲಿ ಹಾಗೂ ವಾಯುಮಾಲಿನ್ಯದಿಂದ, ಈ ತೊಂದರೆ ಹೇರಳವಾಗಿ ಕಾಣಿಸಿಕೊಳ್ಳುತ್ತಿದೆ. ಅಸ್ತಮಾ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಿ, ಜನರು ಹೊಂದಿರುವ ಸಂದೇಹ ಹಾಗೂ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಸದುದ್ದೇಶ ಅಸ್ತಮಾ ದಿನಾಚರಣೆ ಹೊಂದಿದೆ.

ಅಸ್ತಮಾ ಎಂದರೇನು ??

ಅಸ್ತಮಾ ಒಂದು ದೀರ್ಘಕಾಲಿಕ ಶ್ವಾಸಕೋಶದ ಅಸ್ವಸ್ಥತೆ. ಶ್ವಾಸನಾಳಗಳ ಒಳಭಾಗದಲ್ಲಿ ಕೆರಳಿಕೆ, ಉರಿಯೂತ (inflammation), ಕಫಾ ಕಾಣಿಸಿಕೊಂಡು ಶ್ವಾಸಸ್ನಾಯುಗಳು ಬಿಗಿಯುವುದರಿಂದ ಉಸಿರಾಟದ ಕೊಳವೆಗಳು ಚಿಕ್ಕದಾಗುತ್ತವೆ. ಇದರಿಂದ ಕೆಮ್ಮು, ಎದೆ ಬಿಗಿತ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ.

ಅಸ್ತಮಾಗೆ ಕಾರಣವೇನು ??

ಅಸ್ತಮಾ ತೊಂದರೆಗೆ ಬಹುಮುಖ್ಯ ಕಾರಣ ಅಲರ್ಜಿ. ಅಲರ್ಜಿ ಎಂದರೆ-ದೇಹ ಅವಶ್ಯಕ್ಕಿಂತ ಹೆಚ್ಚಾಗಿ ಸ್ಪಂದಿಸುವ ಪ್ರವೃತ್ತಿ(hyper-responsive). ಇದರಿಂದಾಗಿ, ಅವರು ಸೇವಿಸುವ ಅಥವಾ ಉಸಿರಾಡುವ ಗಾಳಿಯಲ್ಲಿ ಕೆಲವು ಕೆರಳಿಕೆ ಉಂಟುಮಾಡುವ ಪ್ರಚೋದಕಗಳ (ಉದಾ: ಧೂಳು, ಧೂಮಪಾನ, ಹೊಗೆ, ತಂಗಾಳಿ, ಸೋಂಕು, ಪರಾಗ, ಹಾಸಿಗೆಯ ಧೂಳುಕೀಟ, ಸಾಕು ಪ್ರಾಣಿಗಳ ರೋಮ, ಪ್ರಬಲ ವಾಸನೆ, ರಾಸಾಯನಿಕ ಹೊಗೆ) ಸಂಪರ್ಕದಿಂದ ಮೂಗು-ಗಂಟಲು- ಶ್ವಾಸನಾಳಗಳಲ್ಲಿ ಕೆರೆತ, ಭಾವು ಹಾಗೂ ಕಫಾ ಕಾಣಿಸಿಕೊಳ್ಳುತ್ತದೆ‌.

ಅಸ್ತಮಾ ಯಾರಲ್ಲಿ ಕಾಣಿಸಿಕೊಳ್ಳುತ್ತದೆ 
?? 

ಇದು ಮಕ್ಕಳಿಂದ ಹಿಡಿದು 40 ವಯಸ್ಸಿನೊಳಗೆ ಅನುವಂಶೀಯವಾಗಿ ಬರುವ ಸಾಧ್ಯತೆ ಹೆಚ್ಚು. ಅದರಲ್ಲೂ ಹೆಚ್ಚು ಧೂಳಿನ ವಾತಾವರಣದಲ್ಲಿರುವವರಲ್ಲಿ (ಉದಾ: ಶಿಕ್ಷಕರು, ಗೃಹಿಣಿಯರು,ಸಂಚಾರಿ ಪೊಲೀಸರು,ದ್ವಿಚಕ್ರ ವಾಹನಗಳಲ್ಲಿ ಚಲಿಸುವುವರು,ಗಿರಣಿಗಾರರು,ಬಡಗಿಯವರು,ರೈತರು,ರಸ್ತೆಯ ಬದಿ ಮಾರಾಟ ಮಾಡುವವರಲ್ಲಿ) ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಪ್ಲಾಸ್ಟಿಕ್, ರಬ್ಬರ್, ಲೋಹ ದಂತಹ ಕೈಗಾರಿಕಾ ಕಾರ್ಮಿಕರಲ್ಲಿ, ಬಣ್ಣ ಸಿಂಪಡಿಸುವವರಲ್ಲಿಯೂ ಅಸ್ತಮಾ ಕಾಣಿಸಿಕೊಳ್ಳಬಹುದು.





ಅಸ್ತಮಾದ ಲಕ್ಷಣಗಳೇನು ??

ಮೊದಮೊದಲು ಕೇವಲ ಅಲರ್ಜಿ ನೆಗಡಿ - Allergic rhinosinusitis (ನಿರಂತರ ಶೀತ, ಮೂಗಿನಲ್ಲಿ ಸದಾ ನೀರಿಳಿಯುವುದು, ಪದೇ ಪದೇ ಸೀನುವುದು, ತಲೆ ಭಾರವೆನಿಸುವುದು) ಕಾಣಿಸಿಕೊಳ್ಳುತ್ತದೆ. ಈ ಹಂತದಲ್ಲಿ ಅಲರ್ಜಿ ನಿಯಂತ್ರಣ ಪಡೆಯದಿದ್ದರೆ, ಅದು ಗಂಟಲು ಹಾಗೂ ಶ್ವಾಸಕೋಶಕ್ಕೆ ತೊಂದರೆ ನೀಡಿ ಅಸ್ತಮವಾಗಿ ಪರಿವರ್ತನೆಗೊಳ್ಳಬಹುದು.

ಅಸ್ತಮಾದ ಲಕ್ಷಣಗಳು ಹೀಗಿವೆ - ಚಿಕಿತ್ಸೆಗೆ ಸ್ಪಂದಿಸದ ದೀರ್ಘಕಾಲದ ಕೆಮ್ಮು, ಗಂಟಲು ಕೆರೆತ, ಕಫಾ ಕಟ್ಟುವುದು ಹಾಗೂ ಉಸಿರಾಟದ ತೊಂದರೆ(ಉಬ್ಬಸ) ಕಾಣಿಸಿಕೊಳ್ಳುವುದು. ಎದೆ ಬಿಗಿಯುವುದು, ಸಿಳ್ಳೆ ಹೊಡೆಯುವ ಶಬ್ದ ಬರುವುದು (wheezing) ರೋಗದ ಬಹುಮುಖ್ಯ ಲಕ್ಷಣ.

ಈ ಎಲ್ಲಾ ಲಕ್ಷಣಗಳು ಪ್ರಮುಖವಾಗಿ ಮಳೆ ಹಾಗೂ ಚಳಿಗಾಲದಲ್ಲಿ (ತಂಪು ವಾತಾವರಣದಲ್ಲಿ), ಅದರಲ್ಲೂ ರಾತ್ರಿ ಹಾಗೂ ಬೆಳಗಿನ ಜಾವ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅಸ್ತಮಾ ವೆಂದರೆ ಉಬ್ಬಸ ವಿರಲೇಬೇಕೆಂಬ ಭಾವನೆ ತಪ್ಪು. ಕೇವಲ ದೀರ್ಘಕಾಲದ ಕೆಮ್ಮು ಕೂಡ ಅಸ್ತಮಾದ ಲಕ್ಷಣ (cough variant asthma).

ಅಸ್ತಮಾವನ್ನು ಪತ್ತೆ ಹಚ್ಚುವುದು ಹೇಗೆ ??


ಎದೆಯ x-ray ( ಕೆಮ್ಮಿಗೆ ಅನ್ಯ ಕಾರಣ ನೋಡಲು ),ರಕ್ತಪರೀಕ್ಷೆ ( ಅಲರ್ಜಿಯ ಪ್ರಮಾಣ ನೋಡಲು) ಹಾಗೂ Pulmonary function test -PFT (ಶ್ವಾಸನಾಳಗಳಲ್ಲಿ ಉಸಿರಾಟದ ಅಡಚಣೆ ನೋಡಲು) ಪರೀಕ್ಷೆ ಮಾಡಲಾಗುತ್ತದೆ. ಅಸ್ತಮಾ ತೊಂದರೆ ಖಚಿತಪಡಿಸಿ, ತೀವ್ರತೆ ತಿಳಿಯಲು PFT ಪರೀಕ್ಷೆ ಅವಶ್ಯಕ.

PULMONARY FUNCTION TESTING


ಅಸ್ತಮಾ ಚಿಕಿತ್ಸೆ ಹೇಗಿರುತ್ತದೆ ??

ಅಸ್ತಮಾ ಎಂದ ತಕ್ಷಣ ಭಯಬೀತರಾಗುವುದು ಬೇಡ. ಅಲರ್ಜಿತಡೆಗಟ್ಟುವ ಮುಂಜಾಗೃತಾ ಕ್ರಮಗಳನ್ನು ಅನುಸರಿಸುವ ಜೊತೆಗೆ ಸರಿಯಾದ ಚಿಕಿತ್ಸೆ ಪಡೆದರೆ, ಅಸ್ತಮಾ ಸಂಪೂರ್ಣವಾಗಿ ನಿಯಂತ್ರಣ ದಲ್ಲಿಡಲು ಸಾಧ್ಯ. ಅಸ್ತಮಾಗೆ ನುಂಗುವ ಮಾತ್ರೆ ಗಳಿಗಿಂತ ಇನ್ಹೇಲರ್ ಔಷಧಿಯೇ ಅತ್ಯುತ್ತಮವಾದದ್ದು. ಇದು ಗುಣಲಕ್ಷಣಗಳನ್ನು ಕಡಿಮೆ ಮಾಡುವುದಲ್ಲದೆ, ದೀರ್ಘಕಾಲ ಹತೋಟಿಯಲ್ಲಿಡುತ್ತದೆ.

ಇನ್ಹೇಲರ್ ಗಳ ಬಗ್ಗೆ ಇವೆ ಹಲವಾರು ತಪ್ಪು ಕಲ್ಪನೆಗಳು !!

ಜನಸಾಮಾನ್ಯರು ಇನ್ಹೇಲರ್ ಔಷಧಿಯ ಬಗ್ಗೆ ಅನಾವಶ್ಯಕ ಭಯ ಹಾಗೂ ತಪ್ಪು ಕಲ್ಪನೆಗಳಿಂದ ಮೌಢ್ಯತೆಗೆ ಒಳಗಾಗಿದ್ದಾರೆ. ಕೆಲವು ಪ್ರಶ್ನೋತ್ತರಗಳ ಮೂಲಕ ಇನ್ಹೇಲರ್ ಬಗ್ಗೆ ಸರಿಯಾದ ಮಾಹಿತಿ ಪಡೆಯೋಣ.

1. ಅಸ್ತಮಾಗೆ ಇನ್ಹೇಲರ್ ಏಕೆ ಅವಶ್ಯಕ ?


ಇನ್ಹೇಲರ್ ಎಂದರೆ ಬಾಯಿಯ ಮೂಲಕ ಉಸಿರೆಳೆಯುವ ಔಷಧಿ ಯಂತ್ರ. ಇದರಿಂದ ಔಷಧಿ ನೇರವಾಗಿ ಶ್ವಾಸ ನಾಳಗಳಿಗೆ ತಲುಪುವುದರಿಂದ ಕೆಮ್ಮು,ಕಫಾ ಹಾಗೂ ಉಸಿರಾಟದ ತೊಂದರೆ ಬೇಗನೆ ಶಮನವಾಗುತ್ತದೆ.

2. ಮಾತ್ರೆ ಗಳಿಗಿಂತ ಇನ್ಹೇಲರ್ ಏಕೆ ಉತ್ತಮ ?


ಬಾಯಿಂದ ಸೇವಿಸುವ ಮಾತ್ರೆಗಳು ಉದರದಿಂದ ರಕ್ತಸಂಚಾರಕ್ಕೆ ತಲುಪಿ, ಕೇವಲ ಶ್ವಾಸಕೋಶಕಷ್ಟೇ ಅಲ್ಲದೆ ದೇಹದೆಲ್ಲೆಡೆ ತಲುಪುತ್ತದೆ. ಇದರಿಂದ ಔಷಧಿಯ ಪ್ರಮಾಣದ (dose) ಅವಶ್ಯಕತೆ ಹೆಚ್ಚಿರುತ್ತದೆ ಹಾಗೂ ಅಡ್ಡ ಪರಿಣಾಮಗಳೂ ಹೆಚ್ಚು. ಇನ್ಹೇಲರ್ ನೇರವಾಗಿ ಅವಶ್ಯವಿರುವ ಕಡೆ ತಲುಪುವುದರಿಂದ ಔಷಧಿಯ ಪ್ರಮಾಣ ಕಡಿಮೆಗೊಳಿಸಬಹುದು ಹಾಗೂ ಅಡ್ಡ ಪರಿಣಾಮಗಳನ್ನು ತಡೆಗಟ್ಟಬಹುದು. 

3. ಇನ್ಹೇಲರ್ ಕೆಮ್ಮು- ವೀಸಿಂಗ್ - ಉಬ್ಬಸ ವಿದ್ದರಷ್ಟೇ ಬಳಸಬೇಕಾ ?


ಅಸ್ತಮಾ ತೀವ್ರತೆಯ ಅನುಸಾರ ,ಇನ್ಹೇಲರ್ ಕನಿಷ್ಠವಾದರೂ 3 ರಿಂದ 4 ತಿಂಗಳವರೆಗೆ ಸತತವಾಗಿ ಪ್ರತಿದಿನ ಉಪಯೋಗಿಸಬೇಕಾಗುತ್ತದೆ. ರೋಗಲಕ್ಷಣ ಶಮನವಾದ ತಕ್ಷಣ ನಿಲ್ಲಿಸುವುದು ಅಥವಾ ತೊಂದರೆ ವಿದ್ದಾಗಷ್ಟೇ ಬಳಸುವುದು ಅನುಚಿತ.

4. ಇನ್ಹೇಲರ್ ಸತತವಾಗಿ ಹಲವು ತಿಂಗಳ ಕಾಲ ವೇಕೆ ಬಳಸಬೇಕು ?


ಇನ್ಹೇಲರ್ ಬಳಸಲು ಶುರು ಮಾಡಿದ ಕೆಲವು ದಿನಗಳಲ್ಲೇ ಕೆಮ್ಮು,ಕಫಾ,ವೀಸಿಂಗ್ ಕಡಿಮೆಯಾಗಬಹುದು ಆದರೆ ಶ್ವಾಸನಾಳಗಳ ಊರಿಯೂತ ಶಮನವಾಗಲು ಸಮಯ ತೆಗೆದುಕೊಳ್ಳುತ್ತದೆ. ಇನ್ಹೇಲರ್ ಈ ಪ್ರಕ್ರಿಯೆಯನ್ನು ಕಡಿಮೆಗೊಳಿಸುತ್ತಾ ನಮಗರಿವಿಲ್ಲದಂತೆ ಒಳಗೆ ಕೆಲಸ ಮಾಡುತ್ತಿರುತ್ತದೆ. ಅಸ್ತಮಾ ದೀರ್ಘಕಾಲ ನಿಯಂತ್ರಣದಲ್ಲಿಡಲು ಉರಿಯೂತ ಶಮನವಾಗುವುದು ಅವಶ್ಯಕ. 

5. ಇನ್ಹೇಲರ್ ಒಮ್ಮೆ ಶುರುಮಾಡಿದರೆ ಅದು ಅಭ್ಯಾಸವಾಗಿ ಬಿಡುತ್ತದೆಯೇ ?

ಇಲ್ಲಾ. ಇದು ಕೇವಲ ತಪ್ಪು ಕಲ್ಪನೆ. ಮೇಲೆ ವಿವರಿಸಿದ ಹಾಗೆ ಕೇವಲ ತೊಂದರೆ ವಿದ್ದಾಗಷ್ಟೇ ಕೆಲವು ದಿನಗಳು ಬಳಸಿ ನಿಲ್ಲಿಸಿದರೆ, ಪುನಃ ಲಕ್ಷಣಗಳು ಮರುಕಳಿಸುತಿರುತ್ತದೆ. ಈ ರೀತಿಯ ಚಕ್ರಗತಿಯಿಂದ, ಇನ್ಹೇಲರ್ ಅಭ್ಯಾಸ ವಾಗಿಬಿಟ್ಟಿದೆ ಎಂಬ ಭಾವನೆ ಮೂಡಿಸುತ್ತದೆ. ಪ್ರತಿದಿನ ಬಳಸುವುದರಿಂದ ದೀರ್ಘಕಾಲ ನಿಯಂತ್ರಣ ಸಾಧ್ಯ.

6. ಇನ್ಹೇಲರ್ ಜೀವನಪೂರ್ತಿ ತೆಗೆದುಕೊಳ್ಳಬೇಕಾಗುತ್ತದೆಯೇ ?


ಕನಿಷ್ಠವಾದರೂ 3 ತಿಂಗಳು ಪ್ರತಿದಿನ ಇನ್ಹೇಲರ್ ಬಳಸಿ, ಜೊತೆಜೊತೆಗೆ ಅಲರ್ಜಿಯನ್ನು ತಡೆಗಟ್ಟುವ ಕ್ರಮಗಳನ್ನು ಪಾಲಿಸುತ್ತಾ ಬಂದರೆ, ವೈದ್ಯರು ಇನ್ಹೇಲರ್ ಪ್ರಮಾಣ ಕ್ರಮೇಣ ಕಡಿಮೆ ಮಾಡಿ ನಿಲ್ಲಿಸಬಹುದು. ಅನ್ಯರ ಮಾತು/ಅಭಿಪ್ರಾಯಗಳಿಗೆ ಕಿವಿಗೊಡದೆ ತಜ್ಞರು ಸೂಚಿಸಿದನ್ನು ಪಾಲಿಸಿ.

7. ಇನ್ಹೇಲರ್ ನಲ್ಲಿ ಸ್ಟಿರಾಯ್ಡ್ ಇರುತ್ತದೆಯೇ ?? ಇದರಿಂದ ಕಿಡ್ನಿ ಲಿವರ್ ಹಾಳಾಗುತ್ತದಯೇ ?


ಇನ್ಹೇಲರ್ ನಲ್ಲಿ ಸ್ಟಿರಾಯ್ಡ್ ಅಂಶವೂ ಕೂಡ ವಿರುತ್ತದೆ. ಸ್ಟಿರಾಯ್ಡ್ ಎಂದ ತಕ್ಷಣ ಅದು ಅಪಾಯವೆಂಬ ಭಾವನೆ ತಪ್ಪು. ವಿಶ್ವವ್ಯಾಪಿ ನಡೆದ ಸಂಶೋಧನೆಗಳ ಪ್ರಕಾರ ಅಸ್ತಮಾಗೆ ಇನ್ಹೇಲರ್ ಮೂಲಕ ನೀಡುವ ಉಸಿರೆಳೆಯುವ ಸ್ಟಿರಾಯ್ಡ್ ( inhaled steroid) ಅತ್ಯುತ್ತಮ ಹಾಗೂ ಸುರಕ್ಷಿತ ವೆಂದು ಸಾಬೀತಾಗಿದೆ(ವಿಶ್ವ ಅಸ್ತಮಾ ಚಿಕಿತ್ಸಾ ಮಾರ್ಗಸೂಚಿ). ಇದು ನೇರವಾಗಿ ಶ್ವಾಸನಾಳ ಸೇರುವುದರಿಂದ ಅತ್ಯಂತ ಕನಿಷ್ಠ ಪ್ರಮಾಣ (micrograms)ದಲ್ಲಿ ನೀಡಲಾಗುತ್ತದೆ (ಮಾತ್ರೆಗಳ milligrams ಗಿಂತ ಸಾವಿರಪಟ್ಟು ಕಡಿಮೆ). 


ಈ ರೀತಿ ಸೂಕ್ಷ್ಮ ಪ್ರಮಾಣದಲ್ಲಿ ನೇರವಾಗಿ ಸ್ಟಿರಾಯ್ಡ್ ಬಳಸುವುದರಿಂದ ಅಸ್ತಮಾಗೆ ಇದು ಅತ್ಯಂತ ಪರಿಣಾಮಕಾರಿ ವಾಗಿರುವುದಲ್ಲದೆ, ಅಡ್ಡಪರಿಣಾಮಗಳ ಸಾಧ್ಯತೆ ತುಂಬಾ ಕಡಿಮೆ. ಕಿಡ್ನಿ ,ಲಿವರ್, ಯಾವುದೇ ಅಂಗಾಂಗಗಳಿಗೆ ಅಡ್ಡ ಪರಿಣಾಮ ಬೀರುವುದಿಲ್ಲ. ಗರ್ಭಿಣಿಯರಲ್ಲಿಯೂ ಕೂಡ ಇದು ಸುರಕ್ಷಿತ.

8. ಮೆಡಿಕಲ್ಸ್ ನಲ್ಲಿ ಸಿಗುವ ಎಲ್ಲಾ ಇನ್ಹೇಲರ್ ಗಳು ಒಂದೆಯೇ ?


ವಿವಿಧ ರೀತಿಯ, ವಿವಿಧ ಔಷಧಿಗಳನ್ನು ಹೊಂದಿರುವ ಇನ್ಹೇಲರ್ ಗಳಿರುತ್ತವೆ. ತಜ್ಞರು ತಪಾಸಣೆ ಮಾಡಿ, ರೋಗಿ ಹಾಗೂ ತೊಂದರೆ ಅನುಸಾರ ಯಾವ ರೀತಿಯ ಇನ್ಹೇಲರ್ ಬಳಸಬೇಕೆಂದು ಸೂಚಿಸುತ್ತಾರೆ. ತಾತ್ಕಾಲಿಕ ನಿಯಂತ್ರಣದ ಇನ್ಹೇಲರ್ (salbutamol/ipratropium) ಗಳಿಗಿಂತ ,ದೀರ್ಘಕಾಲ ನಿಯಂತ್ರಣ ನೀಡುವ ಇನ್ಹೇಲರ್ ಗಳು ಉತ್ತಮ. ಇವುಗಳನ್ನ ತಜ್ಞರ ಸಲಹೆ ಪಡೆದೇ ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕು.

9. ಕೋವಿಡ್-19 ಹರಡುತ್ತಿರುವ ಸಮಯದಲ್ಲಿ ಇನ್ಹೇಲರ್ ಬಳಸಬಹುದೇ ?


ಇಂದಿನ ಕರೋನ ಹಾವಳಿಯ ಸಮಯದಲ್ಲಿ ಅಸ್ತಮಾ ತೊಂದರೆಯವರು ಹೆಚ್ಚು ಎಚ್ಚರದಿಂದಿರಬೇಕು. ವೈದ್ಯರು ಇನ್ಹೇಲರ್ ಸೂಚಿಸಿದ್ದರೆ, ಅದನ್ನ ಮುಂದುವರಿಸಿ. ಸ್ವತಃ ನೀವೇ ನಿಲ್ಲಿಸುವುದು ಉಚಿತವಲ್ಲ. ಸಾಧ್ಯವಾದರೆ ವೈದ್ಯರನ್ನು ಭೇಟಿಯಾಗಿ ಅಥವಾ ದೂರವಾಣಿ ಮೂಲಕ ಸಂಪರ್ಕಿಸಿ. ಸ್ಯಾನಿಟೈಸರ್ ವಾಸನೆಯಿಂದ ಎಚ್ಚರದಿಂದಿರಿ.

ಅಲರ್ಜಿ ತೊಂದರೆ ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮಗಳು:

• ಎಣ್ಣೆ/ಕರದಿರುವ ಪದಾರ್ಥ, ಬೇಕರಿ ಹಾಗೂ ಜಂಕ್ ಫುಡ್, ತಂಪು ಪದಾರ್ಥಗಳು, ಹುಳಿ ಹಣ್ಣುಗಳನ್ನ ಆದಷ್ಟು ತ್ಯಜಿಸುವುದು ಉತ್ತಮ. ನಿಮಗೆ ಅಲರ್ಜಿಯಾಗುವ ತಿನಿಸುಗಳನ್ನು ಸ್ವತಃ ನೀವೇ ಗುರುತಿಸಿಕೊಳ್ಳಲು ಪ್ರಯತ್ನಿಸಿ.

• ಬೆಣ್ಣೆ, ತುಪ್ಪ ಮಿತವಾಗಿ ಸೇವಿಸಿ. ಹುಳಿ/ತಂಪಾದ ಮೊಸರು ಮಜ್ಜಿಗೆ ಪ್ರಮುಖವಾಗಿ ತಂಪುಗಾಲದಲ್ಲಿ ಸೇವಿಸುವುದು ಒಳ್ಲೆಯದಲ್ಲ. ಬೆಚ್ಚನೆಯ ನೀರು ಸೇವಿಸಿ.

• ಧೂಮಪಾನ ತ್ಯಜಿಸಿ. ತಂಗಾಳಿ, ಧೂಳು/ಹೊಗೆಯ ವಾತಾವರಣದಲ್ಲಿ ಮೂಗು-ಬಾಯಿ ಕರವಸ್ತ್ರದಲ್ಲಿ ಮುಚ್ಚಿಕೊಳ್ಳಿ ಅಥವಾ ಮಾಸ್ಕ್ ಧರಿಸಿ. ಸಾಕು ಪ್ರಾಣಿಗಳಿಂದ ದೂರವಿರುವುದು ಉತ್ತಮ. 


• ಮಸ್ಕಿಟೋ ಕಾಯಿಲ್, ಪರ್ಫ್ಯೂಮ್, ಹೇರ್ ಡೈಯಿಂಗ್, ಹಸಿ ಬಣ್ಣ, ಕೀಟನಾಶಕ ಸ್ಪ್ರೇ, ಬ್ಲೀಚಿಂಗ್ ಪೌಡರ್ ಬಗ್ಗೆ ಎಚ್ಚರವಹಿಸಿ.

• ವಿಶೇಷವಾಗಿ ಗೃಹಿಣಿಯರು ಕಸ ಗುಡಿಸುವಾಗ, ಧೂಳು ಸ್ವಚ್ಛಗೊಳಿಸುವಾಗ ಎಚ್ಚರವಹಿಸಬೇಕು. ತಲೆಸ್ನಾನದ ನಂತರ ತೇವಯುಕ್ತ ಕೂದಲಿಗೆ ಟವಲ್ ಕಟ್ಟುವುದು ಬೇಡ. 


• ಮನೆಯಲ್ಲಿ ಜಿರಳೆ, ಫಂಗಸ್ ಇಲ್ಲದಂತೆ ಸುಚಿತ್ವ ಕಾಪಾಡಿಕೊಳ್ಳಿ. ಹಾಸಿಗೆಯ ಮೇಲೊದಿಕೆ ,ಕಂಬಳಿ, ದಿಂಬಿನ ಕವರ್ ಗಳನ್ನು ವಾರಕ್ಕೊಮ್ಮೆ ಬಿಸಿನೀರಿನಲ್ಲಿ ತೊಳೆಯಿರಿ.

• ಗ್ಯಾಸ್ಟ್ರೈಟಿಸ್ (ಎದೆ ಉರಿ) ಹಾಗು ಗೊರಕೆ ಕಡಿಮೆ ಮಾಡಿಕೊಳ್ಳಿ. ಆರೋಗ್ಯಕರ ತೂಕ ಕಾಪಾಡಿಕೊಳ್ಳಿ. ಕಷಾಯ ಸೇವಿಸಿ. ಯೋಗ, ಧ್ಯಾನ, ಪ್ರಾಣಯಾಮ ರೂಡಿಸಿಕೊಳ್ಳಿ. ನಿಮ್ಮ ಆರೋಗ್ಯದ ಬಗ್ಗೆ ಒಳ್ಳೆಯದನ್ನು ಯೋಚಿಸಿ.

                   ಅಲರ್ಜಿ-ಆಸ್ತಮಾ ಸಂಪೂರ್ಣವಾಗಿ ಗುಣಪಡಿಸಲಾಗುವುದಿಲ್ಲವೇ ಎಂಬುದು ರೋಗಿಗಳ ಬಹುಮುಖ್ಯ ಪ್ರಶ್ನೆ. ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದರೆ, ಅಲರ್ಜಿಯನ್ನು ನಿರ್ದಿಷ್ಟ ಚಿಕಿತ್ಸಾವಧಿಯ ನಂತರ ಸಂಪೂರ್ಣವಾಗಿ ಗುಣ ಮಾಡಿ ಹೋಗಲಾಡಿಸಲಾಗದೆ ಇದ್ದರೂ, ಜೀವನಪೂರ್ತಿ ನಿಯಂತ್ರಣದಲ್ಲಿಡಲು ಸಾಧ್ಯ. ಚಿಕಿತ್ಸೆ ಪಡೆಯದಿದ್ದರೆ ಅಸ್ತಮಾ ತೀವ್ರರೂಪ ಪಡೆದುಕೊಂಡು ಪ್ರಾಣಹಾನಿ ತಂದೊಡ್ಡಬಹುದು. ಶ್ವಾಸಕೋಶ ತಜ್ಞರಿಂದ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದು, ಸಕಾರಾತ್ಮಕ ಚಿಂತನೆಗಳಿಂದ, ಮೇಲೆ ವಿವರಿಸಿದ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುತ್ತಾ ಉತ್ತಮ ಜೀವನಶೈಲಿ ಮೈಗೂಡಿಸಿಕೊಂಡರೆ, ಖಂಡಿತ ಇನ್ಹೇಲರ್ ನ ಅವಶ್ಯಕತೆ ವಿಲ್ಲದೆ ಶ್ವಾಸಕೋಶದ ಸ್ವಸ್ಥತೆಯನ್ನು ಕಾಪಾಡಿಕೊಳ್ಳಬಹುದು.





ಲೇಖಕರು:
ಡಾ. ಅಜಿತ್ ಈಟಿ
ಶ್ವಾಸಕೋಶದ ತಜ್ಞರು
"ಉಸಿರು"- ದಿ ಬ್ರೀಥ್ ಕ್ಲಿನಿಕ್
ದಾವಣಗೆರೆ.
ph : 9900806121
Mail : ajith.eti1@gmail.com












Comments

Popular posts from this blog

ಗೊರಕೆ ನಿರ್ಲಕ್ಷಿಸಿದರೆ ಅಪಾಯ !

ಧೂಮಪಾನ ತ್ಯಜಿಸಿ, ಶ್ವಾಸಕೋಶದ ಕ್ಯಾನ್ಸರ್ ದೂರವಿಡಿ. ✍️ ಡಾ.ಅಜಿತ್ ಈಟಿ , ಶ್ವಾಸಕೋಶ ತಜ್ಞರು.