ವೈದ್ಯನ ವಾಸ್ತವಿಕ ಜೀವನದ ಒಂದು ಒಳನೋಟ !!




ಲೇಖಕರುಡಾ. ಅಜಿತ್ ಈಟಿ , ಶ್ವಾಸಕೋಶ ತಜ್ಙರು, 
ದಾವಣಗೆರೆ.

ಇಂದು ರಾಷ್ಟ್ರೀಯ ವೈದ್ಯರ ದಿನ. ಭಾರತ ದೇಶ ಕಂಡ ಅಪ್ರತಿಮ ವೈದ್ಯರು ಹಾಗೂ 14 ವರ್ಷ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ ಭಾರತರತ್ನ ಪುರಸ್ಕೃತ ಡಾ. ಬಿಧಾನ್ ಚಂದ್ರ ರಾಯ್ ರವರ ಜನ್ಮ ಮತ್ತು ಮರಣ ದಿನ - ಜುಲೈ 1 ರಾಷ್ಟ್ರೀಯ ವೈದ್ಯರ ದಿನ ಎಂದು ಗುರುತಿಸಲಾಗಿದೆ. ಡಾ.ಬಿ.ಸಿ ರಾಯ್ ರವರು ದೇಶದ ವೈದ್ಯಕೀಯ ವ್ಯವಸ್ಥೆಗೆ ನೀಡಿರುವ ಅಪಾರ ಕೊಡುಗೆಗೆ ಗೌರವ ಸೂಚಿಸುವ ಜೊತೆಗೆ ಸಮಾಜದಲ್ಲಿ ವೈದ್ಯರ ಪಾತ್ರ ,ಶ್ರಮ ಹಾಗೂ ಮಹತ್ವ ವನ್ನು ಎತ್ತಿಹಿಡಿಯುವ ಉದ್ದೇಶ ಈ ದಿನಾಚರಣೆ ಹೊಂದಿದೆ. 
 
ಪುರಾಣಗಳಲ್ಲಿ ವೈದ್ಯರ ಬಗ್ಗೆ ಉಲ್ಲೇಖವಾಗಿರುವ ಎರಡು ಶ್ಲೋಕಗಳು ಈ ಸಮಯದಲ್ಲಿ ನೆನಪಿಸಿಕೊಳ್ಳಬಹುದು.  

"ಶರೀರೇ ಜರ್ಜರಿಭೂತೆ ವ್ಯಾಧಿಗ್ರಸ್ತೇ ಕಲೆಬರೆ , ಔಷಧಂ ಜಾಹ್ನವಿತೋಯಂ ವೈದ್ಯೋ ನಾರಾಯಣ ಹರಿ". ಈ ಶ್ಲೋಕದ ಅರ್ಥ- ಮಾನವನ ದೇಹ ರೋಗಗ್ರಸ್ತ ಗೊಂಡಾಗ ಪವಿತ್ರ ಗಂಗಾ ನೀರಿ ನಂತಹ ಔಷಧಿ ನೀಡುವ ವೈದ್ಯನು ಭಗವಂತ ನಾರಾಯಣನಿಗೆ ಸಮಾನ ಎಂಬುದು. ಮಾನವ ತಾನು ಅನಾರೋಗ್ಯ ಹೊಂದಿದಾಗ ಮೊದಲು ಹುಡುಕಿಕೊಂಡು ಹೋಗುವುದೇ ವೈದ್ಯರನ್ನು . ಸಾವಿನ ಅಂಚಿನಲ್ಲಿರುವವರನ್ನು ಬದುಕಿಸಿ ಅವರ ಹಾಗೂ ಅವರ ಕುಟುಂಬಕ್ಕೆ ಪುನರ್ಜೀವ ನೀಡುವ ಮಹಾತ್ಮರೇ ವೈದ್ಯರು. ಕಡುಬಡವರಿಂದ ಹಿಡಿದು ಆಗರ್ಭ ಶ್ರೀಮಂತರಿಗೂ ಆರೋಗ್ಯವೇ ಪರಮ ಆಸ್ತಿ. ಇಂತಹ ಬೆಲೆಕಟ್ಟಲಾಗದ ಆಸ್ತಿಯನ್ನು ಒದಗಿಸುವ ಕೆಲಸದಲ್ಲಿ ವೈದ್ಯರು ದಿನನಿತ್ಯ ಕಾರ್ಯೋನ್ಮುಖರಾಗಿರುತ್ತಾರೆ.
 
"ವೈದ್ಯರಾಜ ನಮಸ್ತುಭ್ಯಂ ಯಮರಾಜ ಸಹೋದರ, ಯಮಸ್ತು ಹರತಿ ಪ್ರಾಣಾನ್ ವೈದ್ಯೋ ಪ್ರಾಣಾನ್ ಧನನ ಚ".  ಈಗಿನ ಕಾಲಮಾನದ ಯೋಚನಾಲಹರಿಗೆ ಸರಿಹೊಂದುವ ಶ್ಲೋಕವಿದು. ಇದರ ಅರ್ಥ - ವೈದ್ಯನು ಯಮರಾಜನ ಸಹೋದರನಂತೆ, ಯಮರಾಜ ಕೇವಲ ಪ್ರಾಣವನ್ನು ಕಿತ್ತುಕೊಂಡರೆ, ವೈದ್ಯನು ಪ್ರಾಣದ ಜೊತೆ ದುಡ್ಡನ್ನು ಸಹ ಕಿತ್ತುಕೊಳ್ಳುತ್ತಾನೆ. ಪ್ರಸ್ತುತ ಪೀಳಿಗೆಯಲ್ಲಿ ವೈದ್ಯರ ಬಗ್ಗೆ ಈ ತರಹದ ಅಭಿಪ್ರಾಯವೇ ಹೆಚ್ಚು ಅಂದರೆ ತಪ್ಪಾಗಲಾರದು. ವೈದ್ಯರನ್ನು ಕೃತಜ್ಞತಾಭಾವದಿಂದ ನೋಡುವವರ ಸಂಖ್ಯೆ ಇಳಿಮುಖವಾಗುತ್ತಿದೆ.
 
ಈ ಎರಡು ದೃಷ್ಟಿಕೋನದ ನಡುವೆ ವೈದ್ಯರ ಜೀವನೋಪಾದಿ ಹಾಗೂ ಅವರ ಬದುಕಿನ ವಾಸ್ತವಿಕ ಚಿತ್ರಣ ಹೇಗಿರುತ್ತದೆ ಎಂಬುದರ ಬಗ್ಗೆ ತುಸು ಗಮನಹರಿಸೋಣ. ಪ್ರಸ್ತುತ ಕಾಲಘಟ್ಟದಲ್ಲಿ ಒಬ್ಬ ವೈದ್ಯನಾಗುವುದು ಸುಲಭದ ಮಾತೇನಲ್ಲ. ಅದರಲ್ಲೂ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಂದ ಬಂದಿರುವವರಿಗೆ ಅದು ಹರ ಸಾಹಸವೇ ಸರಿ. ದ್ವಿತೀಯ P.U.C ಯ ನಂತರ CET/NEET  ಮೂಲಕ MBBS ಸೀಟ್ ಪಡೆಯಬೇಕೆಂದರೆ ಖಂಡಿತ ಉತ್ತಮ ಶ್ರೇಣಿಯಲ್ಲೇ ತೇರ್ಗಡೆ ಹೊಂದಿರಬೇಕು. ಅತ್ಯುತ್ತಮ ಶ್ರೇಣಿ ಪಡೆದರಷ್ಟೇ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಕಡಿಮೆ ಶುಲ್ಕದಲ್ಲಿ ಸೀಟ್ ಲಭಿಸುತ್ತದೆ. ಅದೇ ಕೊಂಚ ಶ್ರೇಣಿ ದೂರವಿದ್ದರೆ, ವೈದ್ಯನಾಗುವ ಕನಸನ್ನು ಹೊತ್ತಿರುವ ವಿದ್ಯಾರ್ಥಿಗಳು ಹಾಗೂ ಪೋಷಕರು, ತಮಗೆ ಕಷ್ಟವಾದರೂ ಸಹ ಹೆಚ್ಚು ಶುಲ್ಕ ಪಾವತಿಸಿ ಖಾಸಗಿ ಕಾಲೇಜಿನಲ್ಲಿ ಸೀಟ್ ಪಡೆಯುತ್ತಾರೆ‌.
 
MBBS ಮುಗಿಸಿ ಪದವಿ ಪಡೆಯುವುದು ಮೇಲ್ನೋಟಕ್ಕೆ ಸರಳ ಎನ್ನಿಸಬಹುದು‌. ಐದೂವರೆ ವರ್ಷದ ನಿರಂತರ ಪರಿಶ್ರಮ-ಶ್ರದ್ಧೆ-ಸಹನೆ ಅವಶ್ಯಕ. ದೇವರು ನಿರ್ಮಿಸಿರುವ ಅದ್ಭುತ ಮಾನವ ದೇಹವನ್ನು ತಿಳಿದು ಗ್ರಹಿಸುವುದು ಸಾಮಾನ್ಯ ವಿಷಯವಲ್ಲ. ಎಷ್ಟು ಓದಿದರೂ ಮುಗಿಯದ ಪಠ್ಯಕ್ರಮ, ವಿಷಯ ಗ್ರಹಿಸುವ ಹಾಗೂ ನೆನಪಿಡುವ ಸವಾಲು, ಕಠಿಣ ಪರೀಕ್ಷೆಗಳ ವೇಳಾಪಟ್ಟಿ, ತೇರ್ಗಡೆ ಅರ್ಹತೆ, ಒತ್ತಡದ ಮೌಖಿಕ ಪರೀಕ್ಷೆಗಳು ಹೀಗೆ ಎಲ್ಲಾ ಅಂಶಗಳಲ್ಲೂ ಅನ್ಯ ಪದವಿಗಳಿಗಿಂತ MBBS ಕಷ್ಟಕರವಾದದ್ದು. ತೇರ್ಗಡೆ ಹೊಂದಿದ ನಂತರ ಒಂದು ವರ್ಷದ ಗೃಹವೈದ್ಯನಾಗಿ ಕಾರ್ಯನಿರ್ವಹಿಸಬೇಕು‌. ಹಗಲು-ರಾತ್ರಿಯೆನ್ನದೆ ಕೆಲಸ ಮಾಡುತ್ತಾ, ಜವಾಬ್ದಾರಿ ಹೊತ್ತು ರೋಗಿಗಳನ್ನು ಆರೈಕೆ ಮಾಡುವ ಅನುಭವ ಪಡೆಯುತ್ತಾರೆ. MBBS ಪದವಿ ಪಡೆದ ಮೇಲೆ ಎಲ್ಲಾ ಮುಗಿಯಿತೇ ?? ಸಮಾಜದಲ್ಲಿ ಈ ಪದವಿಗೆ ನೀಡುವ ಗೌರವ ಹಾಗೂ ಸಂಬಳ ನಿರಾಸೆ ಮೂಡಿಸುತ್ತದೆ.
 
ಕುಟುಂಬದ ಆರ್ಥಿಕ ಸ್ಥಿತಿ ನೆಲಕಚ್ಚಿದ್ದರೆ, ಬೇರೆ ವಿಧಿ ಇಲ್ಲದೆ ಸರ್ಕಾರಿ ವೈದ್ಯರಾಗಿ ವೃತ್ತಿ ಪ್ರಾರಂಭಿಸುತ್ತಾರೆ. ಆದರೆ ಬಾಗಶಃ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ಸೆಣಸಾಡುತ್ತಾರೆ. ಅತ್ತ ತಮ್ಮ ಇಂಜಿನಿಯರ್ ಸ್ನೇಹಿತರು ಉತ್ತಮ ಕೆಲಸ ಪಡೆದು, ಯೌವನ ಹಾಗೂ ಸಂಬಳದಲ್ಲಿ ಲೈಫ್ ಎಂಜಾಯ್ ಮಾಡುತ್ತಿದ್ದರೆ, ಇತ್ತ ಇವರು ಸಾವಿರಾರು/ ಲಕ್ಷ ಹಣ ಶುಲ್ಕ ಪಾವತಿಸಿ ಬೆಂಗಳೂರು/ ಕೇರಳ ದಲ್ಲಿ ಕೋಚಿಂಗ್ ಪಡೆಯುತ್ತಾ, ತಿಂಗಳುಗಟ್ಟಲೆ ದಿನಕ್ಕೆ 8-10 ಗಂಟೆ ಶ್ರಮವಹಿಸಿ ಓದುತ್ತಿರುತ್ತಾರೆ. ಒಂದು ವರ್ಷ, ಎರಡು ವರ್ಷ, ಮೂರು ವರುಷ ಹೀಗೆ ಸಾಲು ಸಾಲು ಪ್ರವೇಶ ಪರೀಕ್ಷೆ ಬರೆಯುತ್ತಾ ತಮ್ಮ ನೆಚ್ಚಿನ ವಿಷಯದ ಸ್ನಾತಕೋತ್ತರ ಸೀಟ್ ಪಡೆಯಲು ಹಂಬಲಿಸುತ್ತಿರುತ್ತಾರೆ.  ಇಷ್ಟೆಲ್ಲಾ ಕಷ್ಟಪಟ್ಟರೂ ಸ್ನಾತಕೋತ್ತರ ಪದವಿಗೆ ಲಕ್ಷಗಟ್ಟಲೆ ಶುಲ್ಕ ಕಟ್ಟಬೇಕು. ಅತ್ಯುತ್ತಮ ಶ್ರೇಣಿ ಪಡೆದರಷ್ಟೇ ಅಗ್ಗದ ಸರಕಾರಿ ಕಾಲೇಜು. ಒಟ್ಟಾರೆ, ಸುಲಭವಾಗಿ MBBS/PG ಸೀಟ್ ಪಡೆಯಲು,ಅತ್ಯಂತ ಚುರುಕು ಬುದ್ಧಿ ಹೊಂದಿರಬೇಕು ಅಥವಾ ಶ್ರೀಮಂತ ಕುಟುಂಬದಿಂದ ಬಂದಿರಬೇಕು. ಇಲ್ಲವಾದಲ್ಲಿ ಪೋಷಕರ ಜೇಬಿಗೆ ದೊಡ್ಡ ಕತ್ತರಿ ಬೀಳುವುದಂತೂ ಖಾತರಿ.
 
ಮೂರುವರ್ಷದ ಸ್ನಾತಕೋತ್ತರ ತರಬೇತಿ ಗೃಹ ವೈದ್ಯನಿಗಿಂತಾ ಕಠಿಣವಾದದ್ದು. ರೋಗಿಗಳ ಆಗು-ಹೋಗುಗಳಿಗೆ ಸಂಪೂರ್ಣ ಜವಾಬ್ದಾರಿ ಹೊಂದಿರುತ್ತಾರೆ. ಭಾನುವಾರ,ಸರ್ಕಾರಿ ರಜೆ, ಹಬ್ಬ ಎನ್ನದೆ ದಿನಂಪ್ರತಿ ಹಗಲು-ಇರುಳು ರೋಗಿಗಳ ಆರೈಕೆಯಲ್ಲಿ ತೊಡಗಿರುತ್ತಾರೆ. ನಿದ್ದೆಗೆಟ್ಟು ಸತತವಾಗಿ 24 - 36 ಗಂಟೆ ಡ್ಯೂಟಿ ಮಾಡುವುದು ಸರ್ವೇಸಾಮಾನ್ಯ. ಅವರು ಅನುಭವಿಸುವ ಕೆಲಸದ ಒತ್ತಡ, ಪ್ರತಿದಿನ ನೋಡುವ ಸಾವು ನೋವುಗಳು, ತಪ್ಪು ಮಾಡುವ ಭಯ, ತಪ್ಪು ಎಸಗಿದಾಗ ಹಿರಿಯ ವೈದ್ಯರಿಂದ ನಿಂದನೆ ಅವಮಾನ, ಗಿಲ್ಟ್ , ಯಾರಿಗೂ ಹೇಳಿಕೊಳ್ಳದೆ ಸಹಿಸಿಕೊಳ್ಳುತ್ತಾರೆ. ತಮ್ಮ ವೈಯಕ್ತಿಕ ಜೀವನಕ್ಕೂ ಕೂಡ ಬಿಡುವು ಸಿಗುವುದು ವಿರಳ. ಇದರ ಜೊತೆ ಜೊತೆಗೆ ವಿಷಯದ ಆಳ ಅಧ್ಯಯನ, ಸೆಮಿನಾರ್ ಗಳು, ಸಂಶೋಧನಾ ಪ್ರಬಂಧ ರಚನೆ, ಇವನೆಲ್ಲಾ ನಡೆಸುತ್ತಿರಬೇಕು. ಕಠಿಣ ರೀತಿಯ ಪರೀಕ್ಷಾ ಕ್ರಮವನ್ನು ಗೆದ್ದು ಪದವಿಯನ್ನು ಪಡೆಯುತ್ತಾರೆ. ಇದಾದ ನಂತರವೂ ಹಲವರು ಮತ್ತೆ ಮೂರುವರ್ಷದ ಸೂಪರ್ ಸ್ಪೆಷಾಲಿಟಿ ಪದವಿ ಕೂಡ ಪಡೆಯುತ್ತಾರೆ.
 
ಈ ತೆರನಾಗಿ ಒಬ್ಬ ತಜ್ಞ ವೈದ್ಯರಾಗಲು ಕನಿಷ್ಠವೆಂದರೂ 10-12 ವರ್ಷ ನಿರಂತರವಾಗಿ ಕಷ್ಟಪಡಬೇಕು ಜೊತೆಗೆ ಲಕ್ಷಗಟ್ಟಲೆ ಖರ್ಚು ಸಹ ಭರಿಸಬೇಕು. ತಜ್ಞ ವೈದ್ಯರಾದ ಮೇಲೆ ತುಸು ನಿಟ್ಟುಸಿರು ಬಿಡಬಹುದು, ಆದರೆ ಮುಂದಿನ ಹಾದಿ ಸುಗಮವೇನಲ್ಲ. ಇವರು ತಜ್ಞವೈದ್ಯರೆಂದು ಯಾರುಕೂಡ ಲಕ್ಷಗಟ್ಟಲೆ ಸಂಬಳವೇನೋ ಕೊಡುವುದಿಲ್ಲ. ಇರುವ ಕೆಲವೇ ಸರ್ಕಾರಿ ಮೆಡಿಕಲ್ ಕಾಲೇಜ್ ನಲ್ಲಿ ಹುದ್ದೆ ಸಿಗಲು ಅದೃಷ್ಟ ಹಾಗೂ ಪ್ರಭಾವ ಹೊಂದಿರಬೇಕು. ಹುದ್ದೆ ಸಿಕ್ಕರೂ ಸಹ ತಾವು ಕಲಿತಿರುವ ಆಧುನಿಕ ಜ್ಞಾನ- ಕೌಶಲಗಳನ್ನು ಅಳವಡಿಸಲು ಸೂಕ್ತ ವ್ಯವಸ್ಥೆ ಹಾಗೂ ಸೌಲಭ್ಯವಿರುವುದಿಲ್ಲ. ಇತ್ತ ಖಾಸಗಿ ಮೆಡಿಕಲ್ ಕಾಲೇಜ್ ನಲ್ಲಿ MD/MS ವೈದ್ಯರಿಗೆ ಪ್ರಥಮ ವೇತನ ಸಾಮಾನ್ಯವಾಗಿ 45 - 70 ಸಾವಿರ, Mch/DM ಸೂಪರ್ ಸ್ಪೆಷಲಿಸ್ಟ್ ಗೆ ಲಕ್ಷದ ಹತ್ತಿರ ವಿರುತ್ತದೆ. ನಾನ್-ಕ್ಲಿನಿಕಲ್ ಸ್ನಾತಕೋತ್ತರ ಪದವಿಗೆ ವೇತನ ತೀರಾ ನಿರಾಸೆ ಮೂಡಿಸುತ್ತದೆ. ಕಾರ್ಪೊರೇಟ್ ಹಾಸ್ಪಿಟಲ್ ಗಳಲ್ಲಷ್ಟೇ ಹೆಚ್ಚಿನ ವೇತನ ಸಿಗಬಹುದು, ಆದರೆ ಅದಕ್ಕೆ ತಕ್ಕಷ್ಟೇ ಕೆಲಸದ ಸಮಯ ಹಾಗೂ ಒತ್ತಡವಿರುತ್ತದೆ.
 
ಇನ್ನೂ ವೈದ್ಯನಾಗಿ ಪ್ರಾಕ್ಟೀಸ್ ಮಾಡಲು ಶುರುಮಾಡಿದಾಗ  ಹತ್ತು ಹಲವು ಸವಾಲುಗಳು ಎದುರಾಗುತ್ತವೆ. ಉತ್ತಮ ಅನುಭವ ಹಾಗೂ ಹೆಸರು ಪಡೆಯುವವರೆಗೂ ವೃತ್ತಿ ಜೀವನ ಮಂದಗತಿಯಲ್ಲೇ ಸಾಗುತ್ತಿರುತ್ತದೆ. ಇಂದಿನ ರೋಗಿ ಹಾಗೂ ವೈದ್ಯರ ಸಂಬಂಧ ಕ್ಷೀಣಿಸುತ್ತಿರುವುದಂತೂ ಸತ್ಯ. ಅವರಿಗೆ ವೈದ್ಯರಿಂದ ಅವಾಸ್ತವಿಕ ನಿರೀಕ್ಷೆಗಳು. ಡಾಕ್ಟರ್ ಬಳಿ ಹೋಗುವ ಮುನ್ನವೇ ಗೂಗಲ್ ಮಾಡಿ, ಒಂದು ತೊಂದರೆಗೆ ಹತ್ತಾರು ಪ್ರಶ್ನೆಗಳನ್ನು ಮುಂದಿಡುತ್ತಾರೆ. ಆಸ್ಪತ್ರೆಯಲ್ಲಿ ರೋಗಿ ತೀವ್ರ ತೊಂದರೆಯಿಂದ ICU ನಲ್ಲಿ ಅಡ್ಮಿಟ್ ಆದರೆ, ಕುಟುಂಬದವರು ವೈದ್ಯರ ಮೇಲೆ ಅನಗತ್ಯ ಸಂಶಯ ಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅನಗತ್ಯ ವಾಗಿ ICU ನಲ್ಲಿ ಇಟ್ಟಿದ್ದಾರೆ, ವೆಂಟಿಲೇಟರ್ ಹಾಕಿದ್ದಾರೆ ಎಂಬ ಸಂಶಯಗಳು ತೀರ ಸಾಮಾನ್ಯ. ವೈದ್ಯರು ಅತ್ಯಂತ ಸಮಾಧಾನ ವಹಿಸಿ ಅವರೆಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ. ವೈದ್ಯರ ಪ್ರಯತ್ನ ಮೀರಿ ಸಹ ರೋಗಿ ಸಾವನ್ನಪ್ಪಿದರೆ ವೈದ್ಯರ ಮೇಲೆ ಅವಹೇಳನ, ಹಲ್ಲೆ ಮಾಡುವ ಘಟನಾವಳಿಗಳು ಸಾಮಾನ್ಯವಾಗಿದೆ. ಈ ತರಹದ ಉದ್ಧಟತನದಿಂದ, ವೈದ್ಯರ ಆತ್ಮವಿಶ್ವಾಸ ಹಾಗೂ ಗೌರವದ ಮೇಲೆ ದೊಡ್ಡ ಪೆಟ್ಟು ಬೀಳುತ್ತದೆ. ವೈದ್ಯರಾಗುವ ಕನಸು ಹೊತ್ತಿರುವ ಯುವ ವಿದ್ಯಾರ್ಥಿಗಳು ಸಹ ಮೆಡಿಕಲ್ ಸೇರಲು ಹಿಂದೆ ಸರಿಯಬಹುದು.
 
ಇನ್ನೂ ವೈದ್ಯರ ಮೇಲೆ ಬಹು ಸಾಮಾನ್ಯ ಆಪಾದನೆ ಎಂದರೆ ರೋಗಿಗಳನ್ನು ಹೆದರಿಸಿ ಅನಾವಶ್ಯಕ ಪರೀಕ್ಷೆಗಳನ್ನು ಮಾಡುತ್ತಾರೆ , 'ಬಡವರ ಸುಲಿಗೆ' , 'ಹಗಲು ದರೋಡೆ' ಎಂಬ ಕಠೋರ ಶಬ್ದಗಳಿಂದ ನಿಂದಿಸುತ್ತಾರೆ. ಈ ರೀತಿ ಹೇಳಿಕೆ ನೀಡುವ ಮುಂಚೆ ಕೊಂಚ ಆಲೋಚನೆ ಮಾಡಬೇಕು. ಮೇಲೆ ಹೇಳಿದ ಹಾಗೆ ಮಾನವನ ದೇಹ ದೇವರು ಸೃಷ್ಟಿಸಿರುವ ಒಂದು ವಿಸ್ಮಯ. ಅದು ಯಾವುದೇ ಮಾನವನಿರ್ಮಿತ ಯಂತ್ರದಂತೆ ಅಲ್ಲ. ಒಂದೇ ರೋಗ ಬೇರೆಬೇರೆ ರೀತಿಯಲ್ಲಿ ಕಾಣಿಸಿಕೊಳ್ಳಬಹುದು ಹಾಗೂ ಚಿಕಿತ್ಸೆಗೆ ಸ್ಪಂದಿಸುವ ಶಕ್ತಿ ಮತ್ತು ಸಮಯ ಸಹ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ.  ರೋಗಿಯ ಆರ್ಥಿಕ ಪರಿಮಿತಿಯನ್ನು ತಿಳಿದು ಅಗತ್ಯ ಪರೀಕ್ಷೆಗಳನ್ನ ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ಆಸ್ಪತ್ರೆಯ ಸೌಲಭ್ಯಕ್ಕೆ ,ತಜ್ಞರ ಪರಿಣತಿ, ಸೇವೆಯ ಗುಣಮಟ್ಟದ ಅನುಸಾರ ಶುಲ್ಕ ವಿರುತ್ತದೆ. ಜನರು ಅವರ ಪರಿಮಿತಿ ತಿಳಿದು, ಸರಿಯಾದ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇನ್ನೊಂದು ವಿಚಾರ ವೇನೆಂದರೆ, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ನಂತರ ಕಟ್ಟುವ ಕೊನೆಯ ಬಿಲ್ಲಿನ ಹಣದಲ್ಲಿ, ಕೇವಲ ಸರಾಸರಿ 5% ರಷ್ಟು ವೈದ್ಯರ ಶುಲ್ಕ ವಿರಬಹುದು.
 
ಉತ್ತಮ ರೀತಿಯ ಸೌಕರ್ಯಗಳನ್ನ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯ ಗೊಳಿಸಿ, ತಜ್ಞ ವೈದ್ಯರಿಗೆ ಉತ್ತಮ ವೇತನ ನೀಡಿ, ಔಷಧಿಗಳ ದರ ನಿಯಂತ್ರಣ ಮಾಡಿದರೆ ಇಂತಹ ಯಾವ ತಾಪತ್ರೆಯೂ ಉದ್ಭವಿಸುವುದಿಲ್ಲ. ಜೊತೆಗೆ ಸರ್ಕಾರಿ MBBS/PG ಸೀಟುಗಳನ್ನು ಹೆಚ್ಚಿಸಿ, ಖಾಸಗಿ ಕಾಲೇಜಿನ ಸೀಟುಗಳ ಶುಲ್ಕ ನಿಯಂತ್ರಣಕ್ಕೆ ತರಬೇಕು. ಆಗ ರೋಗಿಗಳು ಹಾಗೂ ವೈದ್ಯರಿಬ್ಬರಿಗೂ ಅನುಕೂಲವಾಗುತ್ತದೆ. ಇದನ್ನ ಅರ್ಥಮಾಡಿಕೊಳ್ಳದೆ ಸುಖಾಸುಮ್ಮನೆ ವೈದ್ಯರನ್ನು ದೂಷಿಸುವುದು ಸಮಂಜಸವಲ್ಲ. ದೇಶದ ಆರೋಗ್ಯ ವ್ಯವಸ್ಥೆಯ ದುಸ್ಥಿತಿಗೆ ವೈದ್ಯರನ್ನು ಬಲಿಪಶು ಮಾಡುವುದು ಯಾವ ರೀತಿ ಸರಿ. ವೈದ್ಯರಾದವರೆಲ್ಲರೂ ಐಷಾರಾಮಿ ಜೀವನವನ್ನೇನು ನಡೆಸುತ್ತಿರುವುದಿಲ್ಲ. ವೃತ್ತಿಜೀವನದಲ್ಲಿ ಅವರು ಹಾಕುವ ಶ್ರಮಕ್ಕೆ ಪ್ರತ್ಯುತ್ತರವಾಗಿ ಸಮಾಜದಲ್ಲಿ ಗೌರವ, ಪಡೆದ ಪರಿಣಿತಿಗೆ ಅರ್ಹ ಶುಲ್ಕ, ವೇತನ ಅಪೇಕ್ಷಿಸುತ್ತಾರೆ. ಜನರು ಹೋಟೆಲ್, ಅಲಂಕಾರ, ಪಾರ್ಲರ್, ಮೋಜು,ಕಾರು ಆಡಂಬರಕೆಲ್ಲಾ ಏನನ್ನೂ ಲೆಕ್ಕಿಸದೆ ಕೇಳಿದಷ್ಟು ಹಣ ಬಿಚ್ಚುತ್ತಾರೆ, ಆದರೆ ತಮ್ಮ ಆರೋಗ್ಯಕ್ಕೆಂದು ವೈದ್ಯರ ಬಳಿ ಹೋದಾಗ ಸಂಕುಚಿತ ದೃಷ್ಟಿಕೋನವೇಕೆ?
 
ಎಲ್ಲಾ ಕ್ಷೇತ್ರಗಳಲ್ಲಿರುವಂತೆ ವೈದ್ಯಕೀಯ ಲೋಕದಲ್ಲಿಯೂ ಕೂಡ ಲೋಪದೋಷಗಳು ಹಾಗೂ ಅಧರ್ಮದ ದಾರಿ ಹಿಡಿದಿವರು ಇರಬಹುದು. ಹಾಗೆಂದು ಇಡೀ ವೈದ್ಯ  ಸಮೂಹಕ್ಕೆ ನಿಂದಿಸುವುದು ಸಮಂಜಸವಲ್ಲ. ಮಾನವೀಯತೆಯ ಹೆಸರಲ್ಲಿ ಕೇವಲ ಅವರತ್ತ ಬೆರಳು ತೋರಿಸುವಂತಹ ಪರಿಸ್ಥಿತಿ ಎದುರಾಗಿರುವುದು ವಿಪರ್ಯಾಸ. ಮಾಧ್ಯಮ ಹಾಗೂ ಚಲನಚಿತ್ರಗಳಲ್ಲೂ ಸಹ ವೈದ್ಯರನ್ನು ನಕಾರಾತ್ಮಕವಾಗಿ ಬಿಂಬಿಸುವ ಪ್ರಯತ್ನಗಳು ಹೆಚ್ಚಾಗಿವೆ. ಕರೋನ ಎಂಬ ಹೊಸ ಮಹಾಮಾರಿ ವಿಶ್ವವನ್ನೆಲ್ಲಾ ಆವರಿಸಿದೆ. ಇಂತಹ ಭಯಾನಕ ಸನ್ನಿವೇಶದಲ್ಲಿಯೂ ಕೂಡ ಎದೆಗುಂದದೆ, ತನ್ನ ಹಾಗೂ ಕುಟುಂಬ ವನ್ನು ಅಪಾಯದಲ್ಲಿಟ್ಟು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ಅನರ್ಘ್ಯ ಸೇವೆಗೆ ಬೆಲೆ ಕಟ್ಟಲಾಗುವುದೇ? ಕರೋನ ಅಷ್ಟೇ ಅಲ್ಲ ಈ ತರಹದ ನೂರಾರು ರೋಗಗಳು ಬಂದರೂ, ವೈದ್ಯ ತನ್ನ ರೋಗಿಯ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ್ದಾನೆ, ಹೋರಾಡುತ್ತಿದ್ದಾನೆ, ಮುಂದೇಯೂ ಹೋರಾಡಲು ಸನ್ನದ್ಧ ನಾಗಿದ್ದಾನೆ.
 
ರೋಗಿ-ವೈದ್ಯನ ಸಂಬಂಧ ತುಂಬಾ ವಿಶೇಷವಾದದ್ದು. ರೋಗಿಗೆ ಚಿಕಿತ್ಸೆ ನೀಡುವುದರ ಜೊತೆಜೊತೆಗೆ, ತೊಂದರೆಗಳನ್ನು ಆಲಿಸುವ ಕಿವಿ, ಭರವಸೆ ಮೂಡಿಸುವ ಮಾತು, ನೋವಿನಲ್ಲಿ ಸಾಥ್ ನೀಡುವ ಕೈ , ತಳಮಳ ಅರ್ಥ ಮಾಡಿಕೊಳ್ಳುವ ಹೃದಯ, ನೋವು ಮರೆಸುವ ತಿಳಿಹಾಸ್ಯ - ವೈದ್ಯ ಇವನ್ನೆಲ್ಲಾ ನೀಡಿ ರೋಗಿ ಬೇಗನೆ ಚೇತರಿಸಿಕ್ಕೊಳ್ಳವಂತೆ ಮಾಡುತ್ತಾನೆ. ಒಬ್ಬ ರೋಗಿ ಸಾವಿನ ದವಡೆಯಿಂದ ಹೊರಬಂದಾಗ,ಅರವಳಿಕೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಸಫಲವಾದಾಗ, ಪ್ರಪಂಚಕ್ಕೆ ಒಂದು ಜೀವವನ್ನು ತಂದಾಗ - ವೈದ್ಯನಿಗಾಗುವ ಖುಷಿ- ತೃಪ್ತಿ ಉತ್ತುಂಗ ಮಟ್ಟದ್ದು. ಈ ಖುಷಿಗೋಸ್ಕರವೇ ಅವನು ವರ್ಷಗಳ ಕಾಲ ಅವಿರತ ತ್ಯಾಗ ನಿಷ್ಠೆಯಿಂದ ಶ್ರಮ ವಹಿಸಿರುತ್ತಾನೆ. ಅದೇ ರೋಗಿ ಸಾವನ್ನಪ್ಪಿದಾಗ ಅಷ್ಟೇ ದುಃಖ ಪಡುತ್ತಾನೆ, ಆದರೆ ಅದನ್ನು ತೋರ್ಪಡುವುದಿಲ್ಲ.
 
ವೈದ್ಯನಾದವನು ಚಿಕಿತ್ಸೆ ನೀಡಿ ತನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತಾನೆ. ಗುಣಪಡಿಸುವುದು ಬಿಡುವುದು ಆ ಭಗವಂತ. ಹಾಗಾಗಿ ವೈದ್ಯ ಬಳಗದ ಕಳಕಳಿಯ ಮನವಿ ಏನೆಂದರೆ, ಅವರನ್ನು ಸಾಮಾನ್ಯ ಮಾನವ ನೆಂದು ನೋಡಿ. ಅವರನ್ನು ನಾರಾಯಣನಿಗೆ ಹೋಲಸಿ ಹಿಗ್ಗಿಸುವುದು ಬೇಡ, ಯಮನ ಸಹೋದರನೆಂದು ಕುಗ್ಗಿಸುವುದು ಬೇಡ. ಅವರ ಪ್ರಯತ್ನಗಳಿಗೆ ಗೌರವಿಸಿ, ಅವರ ಮೇಲಾಗುತ್ತಿರುವ ಅವಹೇಳನ ಹಾಗೂ ಹಲ್ಲೆಗಳನ್ನು ವಿರೋಧಿಸಿ. ಭಾವನೆಗಳನ್ನು ನಿಯಂತ್ರಿಸಿಕೊಂಡು ವಿವೇಕವನ್ನು ಪ್ರದರ್ಶಿಸಿ. ವೈದ್ಯರ ಮೇಲೆ ನಂಬಿಕೆ ವಿಶ್ವಾಸ ಹೆಚ್ಚಾಗಲಿ, ಧ್ವನ್ಯಾತ್ಮಕ ಭಾವ ತುಂಬಿರಲಿ. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ವೈಯಕ್ತಿಕ ಹಾಗೂ ಸಮುದಾಯದ ಆರೋಗ್ಯ ಸುಧಾರಣೆಗೆ ಶ್ರಮಿಸುತ್ತಿರುವ ವೈದ್ಯರೆಲ್ಲರಿಗೂ ನನ್ನ ಸೆಲ್ಯೂಟ್ ಹಾಗೂ ಹ್ಯಾಪಿ ಡಾಕ್ಟರ್ಸ್ ಡೇ.
 
ಲೇಖಕರು:


ಡಾ. ಅಜಿತ್ ಈಟಿ 
ಶ್ವಾಸಕೋಶ ತಜ್ಙರು
"ಉಸಿರು"- ದಿ ಬ್ರೀಥ್ ಕ್ಲಿನಿಕ್
ದಾವಣಗೆರೆ.
ph : 9900806121

Comments

Post a Comment

Popular posts from this blog

ಅಲರ್ಜಿ , ಅಸ್ತಮಾ , ಇನ್ಹೇಲರ್ ಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ✍️ಡಾ.ಅಜಿತ್ ಈಟಿ

ಗೊರಕೆ ನಿರ್ಲಕ್ಷಿಸಿದರೆ ಅಪಾಯ !

ಧೂಮಪಾನ ತ್ಯಜಿಸಿ, ಶ್ವಾಸಕೋಶದ ಕ್ಯಾನ್ಸರ್ ದೂರವಿಡಿ. ✍️ ಡಾ.ಅಜಿತ್ ಈಟಿ , ಶ್ವಾಸಕೋಶ ತಜ್ಞರು.