ಕ್ಷಯರೋಗ ಬಗ್ಗೆ ಡಾ.ಅಜಿತ್ ಈಟಿ ರವರ ಸಂಪೂರ್ಣ ಮಾಹಿತಿ.

✍️ಡಾ. ಅಜಿತ್ ಈಟಿ , ಶ್ವಾಸಕೋಶದ ತಜ್ಞರು, ದಾವಣಗೆರೆ


March 24 - ಇಂದು "ವಿಶ್ವ ಕ್ಷಯರೋಗ ದಿನ" . ಮಾರ್ಚ್ 24 1882 ರಂದು ರಾಬರ್ಟ್ ಕಾಕ್ ಎಂಬ ವಿಜ್ಞಾನಿ ಕ್ಷಯರೋಗಕ್ಕೆ (Tuberculosis) ಕಾರಣವಾದ ಟಿ.ಬಿ ಸೂಕ್ಷ್ಮಾಣು ವನ್ನು ಕಂಡುಹಿಡಿದ ದಿನ . "ಮೃತ್ಯುವಿನ ನಾಯಕ"( Captain of death) ಎಂದೇ ಹೆಸರು ಪಡೆದಿರುವ ಈ ರೋಗದ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಸೂಕ್ತ ದಿನವಿದು.

ಸಾವಿರಾರು ವರ್ಷಗಳ ಇತಿಹಾಸ ಪಡೆದಿರುವ ಕ್ಷಯರೋಗ ( ಟಿ.ಬಿ) , ಇಂದಿನ ಆಧುನಿಕ ಮಾನವ ಕುಲಕ್ಕೂ ಸಹ ಒಂದು ದೊಡ್ಡ ಕಂಟಕವಾಗಿ ಉಳಿದುಕೊಂಡಿದೆ. ಅದರಲ್ಲೂ ಪ್ರಮುಖವಾಗಿ ಭಾರತ ದೇಶ ಕ್ಷಯರೋಗದಿಂದ ಬಾಧಿತವಾದ ರಾಷ್ಟ್ರಗಳಲ್ಲಿ ಅಗ್ರಸ್ಥಾನ ಪಡೆದಿದೆ. ಆದರೆ ಇತ್ತೀಚೆಗೆ ಕರೋನ ವೈರಸ್ ಕಲಿಸಿಕೊಟ್ಟ ಪಾಠದಿಂದ ದೇಶದಲ್ಲಿರುವ ಕ್ಷಯರೋಗದ ಹಾಗೂ ಅನೇಕ ಸಾಂಕ್ರಾಮಿಕ ರೋಗಗಳ ಹೊರೆಯನ್ನ ಸಮರ್ಪಕವಾಗಿ ಕಡಿಮೆಗೊಳಿಸಲು ಅವಕಾಶವಿದೆ.

ವಿಶ್ವದ ಶೇಕಡ 25% ರಷ್ಟು ಕ್ಷಯರೋಗಿಗಳನ್ನು ಭಾರತ ಹೊಂದಿದೆ.  ಅಂಕಿ ಅಂಶಗಳನ್ನು ಗಮನಿಸಿದರೆ ಪ್ರತಿವರ್ಷ ನಮ್ಮ ದೇಶದಲ್ಲಿ ಲಕ್ಷಾಂತರ ಜನರು ಕ್ಷಯರೋಗದಿಂದ  ಪ್ರಾಣವನ್ನ ಕಳೆದುಕೊಳ್ಳುತ್ತಿದ್ದಾರೆ.  2018 ರಲ್ಲಿ  ಭಾರತದ 26.9 ಲಕ್ಷ  ಜನರು ಟಿ.ಬಿ ಪೀಡಿತರಾದರೆ , ಅದರಲ್ಲಿ 4.40 ಲಕ್ಷ  ಜನರು ಅಸುನೀಗಿದ್ದಾರೆ. ಏಡ್ಸ್ (HIV) ಹಾಗು  ಔಷಧ ನಿರೋಧಕ ಟಿ.ಬಿ (MDR - TB) ಯಿಂದ , ಈ ಸಂಖ್ಯೆ ಹೆಚ್ಚುತ್ತಲೇ ಇದೆ.

ಈ ರೀತಿಯಾಗಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಭಾರತದವರನ್ನು  ನೂರಾರು ವರ್ಷಗಳಿಂದ ಎಳೆ ಎಳೆಯಾಗಿ ನುಂಗುತ್ತಿರುವ  ಕ್ಷಯರೋಗದ ಬಗ್ಗೆ ನಾವೆಷ್ಟು ತಿಳಿದಿದ್ದೇವೆ , ನಾವು ಎಷ್ಟು ಎಚ್ಚರ ವಹಿಸುತ್ತಿದ್ದೇವೆ ಎಂಬುವುದನ್ನು ನಾವು ನಮ್ಮನ್ನ ಕೇಳಿಕೊಳ್ಳಬೇಕಾಗಿರುವ ಅತ್ಯಂತ ದೊಡ್ಡ ಪ್ರಶ್ನೆ.

ಕ್ಷಯರೋಗದ ಲಕ್ಷಣಗಳೇನು??

-- ಎರಡು ವಾರಕ್ಕಿಂತ ಹೆಚ್ಚು ಕಾಣಿಸಿಕೊಳ್ಳುವ ಕೆಮ್ಮು ಹಾಗು ಜ್ವರ , ಕೆಮ್ಮಿನಲ್ಲಿ ರಕ್ತ ಬೀಳುವುದು,  ಊಟ ಸೇರದೆ ಇರುವುದು  , ನಿಶ್ಯಕ್ತಿ ಹಾಗೂ ದೇಹದ ತೂಕ ಕಡಿಮೆಯಾಗುವುದು. 

-- ಕ್ಷಯ ರೋಗ ಯಾವುದೇ ವಯಸ್ಸಿನಲ್ಲಾದರೂ ಕಾಣಿಸಿಕೊಳ್ಳಬಹುದು. ಅದರಲ್ಲೂ ಮಕ್ಕಳಲ್ಲಿ ,ವೃದ್ಧರಲ್ಲಿ ಸಕ್ಕರೆ ಖಾಯಿಲೆ , ಕಿಡ್ನಿ ತೊಂದರೆ , ಏಡ್ಸ್  ,ಕ್ಯಾನ್ಸರ್ ಗಳಂತಹ ರೋಗ ಗಳಿಂದ ಬಳಲುತ್ತಿರುವವರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕ್ಷಯ ಒಂದು ಸಾಂಕ್ರಾಮಿಕ ರೋಗವಾಗಿದ್ದು , ಒಬ್ಬರಿಂದ ಒಬ್ಬರಿಗೆ ಗಾಳಿಯ ಮೂಲಕ ಹರಡುವ ಖಾಯಿಲೆ.

ಶ್ವಾಸಕೋಶದ ಕ್ಷಯರೋಗ ಪತ್ತೆ ಹಚ್ಚುವುದು ಹೇಗೆ ??

ಕಫ ಪರೀಕ್ಷೆ , ಕಫದ ಸಿ.ಬಿ -ನಾಟ್ ( CB-NAAT) ಪರೀಕ್ಷೆ , ಎದೆಯ ಕ್ಷ-ಕಿರಣ ( x-ray )  , ಅವಶ್ಯವಿದ್ದರೆ ಎದೆಯ ಸಿ.ಟಿ ಸ್ಕ್ಯಾನ್ , ಬ್ರಾಂಕೊಸ್ಕೋಪಿ ಮಾಡಲಾಗುತ್ತದೆ.

CB-NAAT ಪರೀಕ್ಷೆಯ ವಿಶಿಷ್ಟತೆ ವೇನೆಂದರೆ , ಈ ಪರೀಕ್ಷೆಯಲ್ಲಿ ಸ್ವಲ್ಪ ಪ್ರಮಾಣದ / ಆರಂಭಿಕ ಹಂತದಲ್ಲಿದ್ದರೂ ಕ್ಷಯ ರೋಗವನ್ನು ಪತ್ತೆಹಚ್ಚಬಹುದು (MDR-TB ಕೂಡ). ಇದು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಸರ್ಕಾರದಿಂದ ಉಚಿತವಾಗಿ ಮಾಡಲಾಗುತ್ತದೆ.

ಚಿಕಿತ್ಸೆ ಹೇಗಿರುತ್ತದೆ ??

-- ಒಳ್ಳೆಯ ವಿಚಾರವೆಂದರೆ ಕ್ಷಯ ರೋಗವನ್ನು ಸಂಪೂರ್ಣವಾಗಿ ಗುಣಮುಖ ಮಾಡಬಹುದು. ಸರಿಯಾದ ಸಮಯಕ್ಕೆ ರೋಗವನ್ನು ಪತ್ತೆ ಹಚ್ಚಿ , ಚಿಕಿತ್ಸೆ ಆರಂಭಿಸಿದರೆ ವ್ಯಕ್ತಿ ಸಂಪೂರ್ಣವಾಗಿ ಗುಣಮುಖನಾಗುತ್ತಾನೆ.

-- ಕ್ಷಯ ರೋಗದಿಂದ ಬಳಲುತ್ತಿರುವ ವ್ಯಕ್ತಿ  ವೈದ್ಯರ ಸೂಚನೆಯ ಅಡಿ , ಕನಿಷ್ಠ ವಾದರೂ 6 ತಿಂಗಳು ಟಿ.ಬಿ ಮಾತ್ರೆಗಳನ್ನು ಚಾಚೂತಪ್ಪದೆ ತೆಗೆದುಕೊಳ್ಳಬೇಕು. ಚಿಕಿತ್ಸೆ ಸರ್ಕಾರದಿಂದ ಉಚಿತವಾಗಿ ನೀಡಲಾಗುತ್ತದೆ.

-- ಕ್ಷಯರೋಗದ ವಿಶಿಷ್ಟತೆ ವೇನೆಂದರೆ , ರೋಗಿ 6 ತಿಂಗಳ ಚಿಕಿತ್ಸೆ ಸರಿಯಾಗಿ ತೆಗೆದುಕೊಳ್ಳದಿದ್ದರೆ ರೋಗ ಮತ್ತೆ ಮರುಕಳಿಸಬಹುದು ಹಾಗೂ ಔಷಧ ನಿರೋಧಕ ಟಿ.ಬಿ (MDR -TB) ಯಾಗಿ ಪರಿವರ್ತನೆಗೊಳ್ಳಬಹುದು. ಇದೇ ಕಾರಣದಿಂದ ಭಾರತದಲ್ಲಿ ಕ್ಷಯರೋಗ ನಿಯಂತ್ರಣ ಕಠಿಣವಾಗಿದೆ.

ಔಷಧ ನಿರೋಧಕ ಟಿ.ಬಿ ( MDR -TB ) ಎಂದರೇನು ??

MDR - TB ಸಾಮಾನ್ಯ 6 ತಿಂಗಳ ಟಿ.ಬಿ ಚಿಕಿತ್ಸೆಗೆ ಸ್ಪಂದಿಸುವುದಿಲ್ಲ. ಈ ತರಹದ ಕ್ಷಯರೋಗಕ್ಕೆ ಹೆಚ್ಚು ಔಷದಗಳಿಂದ ಒಂದುವರೆ - ಎರಡು ವರ್ಷಗಳ ಕಾಲ ಚಿಕಿತ್ಸೆ ನೀಡಬೇಕಾಗುತ್ತದೆ ಹಾಗೂ ಇವರಲ್ಲಿ ಚಿಕಿತ್ಸೆ ಪಡೆದರೂ ಸಹ ಕೇವಲ 40-50% ರಷ್ಟು ಭಾಗದ ರೋಗಿಗಳಸ್ಟೇ ಗುಣಮುಖರಾಗುತ್ತಾರೆ.

MDR - TB ರೋಗಿಗಳ ಸಂಖ್ಯೆ ಭಾರತದಲ್ಲಿ ಏರಿಕೆಯಾಗುತ್ತಿದ್ದು ,  2018 ರಲ್ಲಿ 1.3 ಲಕ್ಷ ಜನರಲ್ಲಿ  MDR - TB ಕಾಣಿಸಿಕೊಂಡಿದೆ.   MDR-TB ನಿರ್ಮಾಣವಾಗುವುದಕ್ಕೆ ಮುಖ್ಯ ಕಾರಣವೇನೆಂದರೆ ರೋಗಿ 6 ತಿಂಗಳ ನಿರ್ದಿಷ್ಟಾವಧಿಯ ಚಿಕಿತ್ಸೆಯನ್ನು ಪೂರ್ಣಗೊಳಿಸದೆ ಇರುವುದು. ಈ ತರಹದ ಮಾರಣಾಂತಿಕ ಕ್ಷಯರೋಗದಲ್ಲೂ ಭಾರತ ಅಗ್ರಸ್ಥಾನ ಪಡೆದಿದ್ದು , ದೇಶದಲ್ಲಿ ಕ್ಷಯದ ನಿರ್ಮೂಲನೆಗೆ ದೊಡ್ಡ ಕಂಟಕವಾಗಿದೆ.

ಕ್ಷಯ ರೋಗ ನಿರ್ಮೂಲನೆಯಲ್ಲಿ ನಮ್ಮ- ನಿಮ್ಮೆಲ್ಲರ ಪಾತ್ರವೇನು ??

ನಮ್ಮ ಸರ್ಕಾರವು 2025 ರ ಒಳಗೆ ಭಾರತವನ್ನು "ಕ್ಷಯ ಮುಕ್ತ ದೇಶ" ವನ್ನಾಗಿ ಮಾಡುವ ಪ್ರಯತ್ನಕ್ಕೆ ಕೈ ಹಾಕಿದೆ. ನಾವು ಈ ಗುರಿಯನ್ನು ಮುಟ್ಟಬೇಕಾದರೆ , ಕೇವಲ ಸರ್ಕಾರ ಹಾಗೂ ವೈದ್ಯರು ಹರಸಾಹಸ ಪಟ್ಟರೆ ಸಾಲದು , ಈ ದೇಶದ ಪ್ರಜೆಗಳಾಗಿರುವ ನಾವು ಕೂಡ ನಮ್ಮ ಮೇಲಿರುವ ಜವಾಬ್ದಾರಿ ಗಳನ್ನ ನಿರ್ವಹಿಸಬೇಕಾಗುತ್ತದೆ. ಯಾವುದೇ ಸಾಂಕ್ರಾಮಿಕ ರೋಗಕ್ಕೆ ಕಡಿವಾಣ ಹೇರಬೇಕೆಂದರೆ ಸಾರ್ವಜನಿಕರ ಪಾತ್ರವೂ ಪ್ರಾಮುಖ್ಯತೆ ಪಡೆಯುತ್ತದೆ.

ಹೀಗೆ ಮಾಡೋಣ :

-- ಚಿಕಿತ್ಸೆಗೆ ಸ್ಪಂದಿಸದ ಕೆಮ್ಮು ಅಥವಾ ಎರಡು ವಾರಕ್ಕಿಂತ ಹೆಚ್ಚಾಗಿ ಕೆಮ್ಮು/ ಜ್ವರ ಕಾಣಿಸಿಕೊಂಡರೆ ತಕ್ಷಣ ಶ್ವಾಸಕೋಶ ತಜ್ಞರನ್ನು ಕಂಡು ಎದೆಯ ಎಕ್ಸರೇ ಹಾಗೂ ಕಫ ಪರೀಕ್ಷೆಯನ್ನು ಮಾಡಿಸಬೇಕು. ಇದು ನಾವೇ ಆಗಿರಬಹುದು ಅಥವಾ ನಮ್ಮ ಬಂಧುಮಿತ್ರರು/ ಸ್ನೇಹಿತರಾಗಗಿರಬಹುದು. ಇಂತಹ ಸಂದರ್ಭದಲ್ಲಿ ಕೆಮ್ಮನ್ನು ನಿರ್ಲಕ್ಷಿಸದೆ ತಜ್ಞ ವೈದ್ಯರನ್ನು ಭೇಟಿಯಾಗಲು ಪ್ರೇರೇಪಿಸಬೇಕು.

-- ನಮ್ಮ ಬಂಧುಬಳಗದವರು ಕ್ಷಯರೋಗದಿಂದ ಬಳಲುತ್ತಿದ್ದರೆ ಅವರಿಗೆ ಪೂರ್ಣಾವಧಿಯ 6 ತಿಂಗಳ ಕಾಲ ಚಿಕಿತ್ಸೆ ತೆಗೆದುಕೊಳ್ಳಲು ಪ್ರೇರೇಪಿಸಬೇಕು.

--  ಇದು ತುಂಬಾನೇ ಮುಖ್ಯವಾದ ವಿಷಯ, ಏಕೆಂದರೆ ಕ್ಷಯರೋಗಿಗಳು ಮೊದಲ ಕೆಲವು ವಾರಗಳ ಕಾಲ ಟಿ.ಬಿ ಮಾತ್ರೆಗಳು ತೆಗೆದುಕೊಂಡ ಬಳಿಕ , ಅವರ ರೋಗ ಲಕ್ಷಣಗಳು ಮಾಯವಾಗುತ್ತವೆ. ಇದು ಅವರಿಗೆ ಚಿಕಿತ್ಸೆ 6 ತಿಂಗಳ ಕಾಲ ಮುಂದುವರಿಸಲು ಅಡ್ಡಿಯಾಗಬಹುದು.

-- ಟಿ.ಬಿ ಮಾತ್ರೆಗಳಿಂದೇನಾದರೂ ಅಡ್ಡಪರಿಣಾಮಗಳು ಕಾಣಿಸಿಕೊಂಡರೆ ವೈದ್ಯರನ್ನು ಕಾಣಲು ಸೂಚಿಸಬೇಕು.

-- ಎಲ್ಲಾ ಕ್ಷಯರೋಗಿಗಳು ಪೂರ್ಣಾವಧಿಯ ಚಿಕಿತ್ಸೆ ಪಡೆದರಷ್ಟೇ ಅದನ್ನು ಒಬ್ಬರಿಂದೊಬ್ಬರಿಗೆ ಹರಡುವುದನ್ನು ತಡೆಗಟ್ಟಬಹುದು ಹಾಗೂ MDR-TB ನಿರ್ಮಾಣವಾಗದಂತೆ ನೋಡಿಕೊಳ್ಳಬಹುದು. ಇದರಿಂದ ಕ್ಷಯ ರೋಗ ನಿರ್ಮೂಲನೆ ಖಂಡಿತ ಸಾಧ್ಯ.

-- ರೋಗದಿಂದ ಬಳಲುತ್ತಿರುವ ವ್ಯಕ್ತಿಯನ್ನ , ಮೊದಲ ಕೆಲವು ವಾರಗಳ ಕಾಲ ಪ್ರತ್ಯೇಕಿಸಿ ಇನ್ನೊಬ್ಬರ ಜೊತೆ ನಿಕಟ ಸಂಪರ್ಕ ಹೊಂದದಂತೆ ಎಚ್ಚರವಹಿಸಬೇಕು.  ಚಿಕಿತ್ಸೆ 2 ವಾರ ಮುಗಿದಮೇಲೆ  , ಅವರು ಚಿಕಿತ್ಸೆ ಮುಂದುವರಿಸುತ್ತಾ ಎಂದಿನಂತೆ ಜೀವನ ನಡೆಸಬಹುದು.

-- ಕಫ ಪರೀಕ್ಷೆ ನೆಗೆಟೀವ್ ಬಂದ ತಕ್ಷಣ ಟಿ.ಬಿ ಖಾಯಿಲೆ ಇಲ್ಲ ವೆಂದು ಭಾವಿಸೋದು ಸೂಕ್ತವಲ್ಲ .ಹಲವು ಬಾರಿ ಟಿ.ಬಿ ಪತ್ತೆಹಚ್ಚಲು ಬ್ರಾಂಕೊಸ್ಕೋಪಿ ಅವಶ್ಯಕತೆ ಇರುತ್ತದೆ. ಹಾಗಾಗಿ ಶ್ವಾಸಕೋಶ ತಜ್ಞರಿಂದ ತಪಾಸಣೆ ಮಾಡಿಸುವುದು ಉತ್ತಮ ಎಂದು ತಿಳಿದಿರಬೇಕು.



ಬ್ರಾಂಕೊಸ್ಕೋಪಿ

-- ಕ್ಷಯರೋಗವನ್ನು ಯಾವುದೇ ರಕ್ತ ಪರೀಕ್ಷೆಯಿಂದ ಕಂಡುಹಿಡಿಯಲಾಗುವುದಿಲ್ಲ. ಇದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು.


-- ಕ್ಷಯ ರೋಗದ ಬಗ್ಗೆ ಸಮಾಜದಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸಬೇಕು ( ಉದಾ: ಕ್ಷಯ ರೋಗ ವಾಸಿಯಾಗುವುದಿಲ್ಲ , ಯಾರೋ ಮಾಟ-ಮಂತ್ರ ಮಾಡಿದ್ದಾರೆ , ಉತ್ತಮ ವರ್ಗದವರಿಗೆ ಕ್ಷಯರೋಗ ಬರುವುದಿಲ್ಲ , ನಮ್ಮ ವಂಶದಲ್ಲಿ ಯಾರಿಗೂ ಟಿ. ಬಿ ಇಲ್ಲ ನಮಗೇಕೆ ಬರುತ್ತದೆ? , ಗರ್ಭಿಣಿಯರು  ಟಿ.ಬಿ ಮಾತ್ರೆ ತೆಗೆದುಕೊಳ್ಳಬಾರದು, ಕ್ಷಯರೋಗ ಬಂದವರನ್ನು ಮದುವೆ ಆಗಬಾರದು , ಅವರಿಗೆ ಮಕ್ಕಳಾಗುವುದಿಲ್ಲ , ಸಾಮಾಜಿಕ ಕಳಂಕ , ಗುಣವಾದ ಮೇಲೂ 6 ತಿಂಗಳ ಕಾಲ ಚಿಕಿತ್ಸೆ ಏಕೆ ಮುಂದುವರಿಸಬೇಕು? ) . ಇವು ಜನಸಾಮಾನ್ಯರಲ್ಲಿ ಇರುವ ಹಲವು ತಪ್ಪು ಕಲ್ಪನೆಗಳು.


ಕೊರೋನ ಕಲಿಸಿ ಕೊಟ್ಟ ಪಾಠದಿಂದ ಕ್ಷಯರೋಗ ನಿರ್ಮೂಲನೆ ಸಾಧ್ಯ!

ಸಧ್ಯದ ಪರಿಸ್ಥಿತಿಯಲ್ಲಿ ನಾವು ಕೊರೋನ ವೈರಸ್ ಬಗ್ಗೆ ಎಚ್ಚೆತ್ತುಕೊಂಡಿದ್ದೇವೆ , ಹಿಂದೆಂದೂ ಇಲ್ಲದ - ನಮ್ಮ ವೈಯಕ್ತಿಕ/ ಕೆಮ್ಮು ನೈರ್ಮಲ್ಯದ ( cough hygeine) ಬಗ್ಗೆ ಹಾಗೂ ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕತೆಯನ್ನ ತಡೆಯಲು ಎಲ್ಲಾ ಅವಶ್ಯಕ ಕ್ರಮಗಳನ್ನು ಪಾಲಿಸುತ್ತಿದ್ದೇವೆ.  ಭಾರತದವರಿಗೆ ಕ್ಷಯರೋಗ ಕಲಿಸಿ ಕೊಡಲಾಗದ ಪಾಠವನ್ನು ಈ ವೈರಸ್ ಕಲಿಸಿಕೊಟ್ಟಿದೆ. ಇದೇ ರೀತಿ ಬರುವ ದಿನಗಳಲ್ಲೂ ಕೂಡ ಇದನ್ನು ಮುಂದುವರಿಸಿ ಹಾಗೂ ಮೇಲೆ ವಿವರಿಸಿರುವ ಹಾಗೆ ನಾಗರಿಕರ ಜವಾಬ್ದಾರಿಗಳನ್ನ ನಿರ್ವಹಿಸಿ ಕೊಂಡು ,  ವರ್ಷದಲ್ಲಿ ಲಕ್ಷಾಂತರ ಜನರನ್ನು ಕೊಲ್ಲುತ್ತಿರುವ ಕ್ಷಯರೋಗದ ( MDR- TB ಮರಣ ಪ್ರಮಾಣ - 40%) ಬಗ್ಗೆಯೂ ನಾವು ಎಚ್ಚರ ವಹಿಸೋಣ , ಭಾರತವನ್ನು " ಕ್ಷಯ ಮುಕ್ತ ದೇಶ" ವನ್ನಾಗಿ ಮಾಡಲು ನಾವೆಲ್ಲರೂ ಕೈ ಜೋಡಿಸೋಣ.






ಲೇಖಕರು:
ಡಾ. ಅಜಿತ್ ಈಟಿ
ಶ್ವಾಸಕೋಶದ ತಜ್ಞರು
ಎಸ.ಎಸ್ ಆಸ್ಪತ್ರೆ ಹಾಗೂ
"ಉಸಿರು"-  ದಿ ಬ್ರೀಥ್ ಕ್ಲಿನಿಕ್
ದಾವಣಗೆರೆ.
ph : 9900806121
Mail : ajith.eti1@gmail.com


Comments

Popular posts from this blog

ಅಲರ್ಜಿ , ಅಸ್ತಮಾ , ಇನ್ಹೇಲರ್ ಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ✍️ಡಾ.ಅಜಿತ್ ಈಟಿ

ಗೊರಕೆ ನಿರ್ಲಕ್ಷಿಸಿದರೆ ಅಪಾಯ !

ಧೂಮಪಾನ ತ್ಯಜಿಸಿ, ಶ್ವಾಸಕೋಶದ ಕ್ಯಾನ್ಸರ್ ದೂರವಿಡಿ. ✍️ ಡಾ.ಅಜಿತ್ ಈಟಿ , ಶ್ವಾಸಕೋಶ ತಜ್ಞರು.