ಅಲರ್ಜಿ , ಅಸ್ತಮಾ , ಇನ್ಹೇಲರ್ ಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ✍️ಡಾ.ಅಜಿತ್ ಈಟಿ
✍️ಡಾ. ಅಜಿತ್ ಈಟಿ , ಶ್ವಾಸಕೋಶದ ತಜ್ಞರು, ದಾವಣಗೆರೆ May 5 2020 - “ವಿಶ್ವ ಅಸ್ತಮಾ ದಿನ”. ಸಾರ್ವಜನಿಕರಲ್ಲಿ ಅಸ್ತಮಾ ರೋಗದ ಬಗ್ಗೆ ಜಾಗೃತಿ ಮೂಡಿಸುವ ಹಿತದೃಷ್ಟಿಯಿಂದ, ಪ್ರತಿವರ್ಷ ಮೇ ತಿಂಗಳ ಮೊದಲನೇ ಮಂಗಳವಾರ "ವಿಶ್ವ ಆಸ್ತಮಾ ದಿನ" ವೆಂದು ಗುರುತಿಸಲಾಗುತ್ತದೆ. ಆಧುನಿಕ ಯುಗದ ಆಹಾರ ಪದ್ಧತಿ, ಜೀವನ ಶೈಲಿ ಹಾಗೂ ವಾಯುಮಾಲಿನ್ಯದಿಂದ, ಈ ತೊಂದರೆ ಹೇರಳವಾಗಿ ಕಾಣಿಸಿಕೊಳ್ಳುತ್ತಿದೆ. ಅಸ್ತಮಾ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಿ, ಜನರು ಹೊಂದಿರುವ ಸಂದೇಹ ಹಾಗೂ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಸದುದ್ದೇಶ ಅಸ್ತಮಾ ದಿನಾಚರಣೆ ಹೊಂದಿದೆ. ಅಸ್ತಮಾ ಎಂದರೇನು ?? ಅಸ್ತಮಾ ಒಂದು ದೀರ್ಘಕಾಲಿಕ ಶ್ವಾಸಕೋಶದ ಅಸ್ವಸ್ಥತೆ. ಶ್ವಾಸನಾಳಗಳ ಒಳಭಾಗದಲ್ಲಿ ಕೆರಳಿಕೆ, ಉರಿಯೂತ (inflammation), ಕಫಾ ಕಾಣಿಸಿಕೊಂಡು ಶ್ವಾಸಸ್ನಾಯುಗಳು ಬಿಗಿಯುವುದರಿಂದ ಉಸಿರಾಟದ ಕೊಳವೆಗಳು ಚಿಕ್ಕದಾಗುತ್ತವೆ. ಇದರಿಂದ ಕೆಮ್ಮು, ಎದೆ ಬಿಗಿತ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಅಸ್ತಮಾಗೆ ಕಾರಣವೇನು ?? ಅಸ್ತಮಾ ತೊಂದರೆಗೆ ಬಹುಮುಖ್ಯ ಕಾರಣ ಅಲರ್ಜಿ. ಅಲರ್ಜಿ ಎಂದರೆ-ದೇಹ ಅವಶ್ಯಕ್ಕಿಂತ ಹೆಚ್ಚಾಗಿ ಸ್ಪಂದಿಸುವ ಪ್ರವೃತ್ತಿ(hyper-responsive). ಇದರಿಂದಾಗಿ, ಅವರು ಸೇವಿಸುವ ಅಥವಾ ಉಸಿರಾಡುವ ಗಾಳಿಯಲ್ಲಿ ಕೆಲವು ಕೆರಳಿಕೆ ಉಂಟುಮಾಡುವ ಪ್ರಚೋದಕಗಳ (ಉದಾ: ಧೂಳು, ಧೂಮಪಾನ, ಹೊಗೆ, ತಂಗಾಳಿ, ಸೋಂಕು, ಪರಾಗ, ಹಾಸಿಗೆಯ ಧೂಳುಕ...